ಮೈಸೂರು: ಅಪಘಾತದಲ್ಲಿ ಗಾಯಗೊಂಡು ಬಿದ್ದಿದ್ದ ವ್ಯಕ್ತಿಯಿಂದ 80 ಸಾವಿರ ರೂ ದೋಚಿದ್ದ ಇಬ್ಬರನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ.
ರಮೇಶ್ ಹಾಗೂ ಮನು ಎಂಬುವವರೇ ಬಂಧಿತ ಆರೋಪಿಗಳು. ಮೈಸೂರು ತಾಲ್ಲೂಕಿನ ಕಡಕೊಳದ ಬಳಿ ಡಿಸೆಂಬರ್.19ರಂದು ಗಣೇಶ್ ಎಂಬುವವರು ಅಪಘಾತದಲ್ಲಿ ಗಾಯಗೊಂಡು ಬಿದ್ದಿದ್ದರು.
ಇದನ್ನು ಓದಿ: ಕಾವೇರಿ ನದಿಯಲ್ಲಿ ಈಜಲು ಹೋಗಿ ಯುವಕ ಸಾವು
ಫ್ಯಾಕ್ಟರಿಯಲ್ಲಿ ಕೆಲಸ ಮುಗಿಸಿ ಮಧ್ಯರಾತ್ರಿ ಮನೆಗೆ ಬರುವಾಗ ಅಪಘಾತವಾಗಿತ್ತು. ಅವರನ್ನು ಆಸ್ಪತ್ರೆಗೆ ಸೇರಿಸುವ ನೆಪದಲ್ಲಿ ಬಂದಿದ್ದ ರಮೇಶ ಹಾಗೂ ಮನು ಎಂಬುವವರು ಗಣೇಶನ ಮೊಬೈಲ್ ಪಡೆದುಕೊಂಡು ಯುಪಿಐ ಮೂಲಕ 80 ಸಾವಿರ ರೂ ಹಣ ವರ್ಗಾವಣೆ ಮಾಡಿಕೊಂಡು ಆಸ್ಪತ್ರೆಗೆ ಸೇರಿಸದೇ ಪರಾರಿಯಾಗಿದ್ದರು.
ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಗಣೇಶ ಅವರ ಸಹೋದರ ಆಸ್ಪತ್ರೆಗೆ ದಾಖಲಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹಣ ವರ್ಗಾವಣೆ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಮೈಸೂರಿನ ಮಹದೇವಪುರ ನಿವಾಸಿಗಳಾದ ರಮೇಶ ಹಾಗೂ ಮನು ಎಂಬುವವರನ್ನು ಬಂಧಿಸಿದ್ದಾರೆ. ಬಂಧಿತರಿಂದ 80 ಸಾವಿರ ರೂ ಹಾಗೂ 2 ಮೊಬೈಲ್ ವಶಕ್ಕೆ ಪಡೆದುಕೊಳ್ಳಲಾಗಿದೆ.





