Mysore
25
overcast clouds
Light
Dark

ವೈದ್ಯ ಡಾ.ವಿ.ಲಕ್ಷ್ಮೀನಾರಾಯಣ ಅವರ ನುಡಿ ನಮನ

ಮೈಸೂರು: ರಾಮಕೃಷ್ಣನಗರದ ನೃಪತುಂಗ ಶಾಲೆಯ ಆವರಣದಲ್ಲಿರುವ ರಮಾಗೋವಿಂದ ರಂಗಮಂದಿರದಲ್ಲಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಮೇ.೨ ರಂದು ಸಂಜೆ ೪.೩೦ಕ್ಕೆಇತ್ತೀಚೆಗೆ ನಿಧನರಾದ ವೈದ್ಯ ಡಾ.ವಿ.ಲಕ್ಷ್ಮೀನಾರಾಯಣ ಅವರ ನುಡಿ ನಮನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಪ್ರಗತಿಪರ ಚಿಂತಕ ಪ್ರೊ.ಕಾಳಚನ್ನೇಗೌಡ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಯುಸಿಎಲ್, ಸಿಪಿಐ ಎಂಎಲ್ ಲಿಬರೇಷನ್, ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ, ಸಮತಾ ವೇದಿಕೆ, ಸಮತಾ ಅಧ್ಯಯನ ಕೇಂದ್ರ, ಆರ್‌ಎಲ್‌ಎಚ್‌ಪಿ, ಧ್ವನಿ ಮಹಿಳಾ ಒಕ್ಕೂಟ, ಎಐಎಂಎಂಎಸ್, ದಲಿತ-ಅಲ್ಪಸಂಖ್ಯಾತ ಸಂಘಟನೆಗಳು, ಸಿಪಿಐ, ಸಿಪಿಎಂ, ಎಸ್‌ಯುಸಿಐ, ಎಐಟಿಯುಸಿ, ಸಿಐಟಿಯು, ಎಐಯುಟಿಯುಸಿ, ಎಐಸಿಸಿಟಿಯು, ಐಎನ್‌ಟಿಯುಸಿ, ಪ್ರಗತಿಪರ ಸಂಘಟನೆಗಳ ಒಕ್ಕೂಟ, ಜನಾಂದೋಲನಗಳ ಮಹಾಮೈತ್ರಿ, ಬುದ್ಧ ಧಮ್ಮ ಸಮಿತಿ, ನೆಲೆ ಹಿನ್ನೆಲೆ, ನಿರಂತರ, ದೇಸಿ ರಂಗ, ಒಡನಾಡಿ, ಜನಮನ ಸಾಂಸ್ಕೃತಿಕ ಸಂಘಟನೆ, ಒಡಲು ಟ್ರಸ್ಟ್ , ಕನ್ನಡ ಪರ ಸಂಘಟನೆಗಳು, ಬಾರುಕೋಲು ಬಳಗ ಹಾಗೂ ಮೈಸೂರಿನ ಸಮಸ್ತ ಪ್ರಗತಿಪರ ಸಂಘಟನೆಗಳು ಸಹಯೋಗದಲ್ಲಿ ನುಡಿನಮನ ಕಾರ್ಯಕ್ರಮ ನಡೆಯಲಿದೆ ಎಂದರು.

ವೈಯಕ್ತಿಕ ಬದುಕಿನಲ್ಲಿ, ವೈದ್ಯಕೀಯ ವೃತ್ತಿಯಲ್ಲಿ ಹಾಗೂ ಸಾಮಾಜಿಕ ಚಳವಳಿಗಳಲ್ಲಿ ತಮ್ಮ ಎಡಪಂಥೀಯ ಚಿಂತನೆಗಳೊಂದಿಗೆ ಎಲ್ಲ ಆಯಾಮಗಳ ಜನಪರ ಚಳವಳಿಗಳೊಂದಿಗೂ ಬೆರೆತು ಬಾಳಿದ ಡಾ.ವಿ.ಲಕ್ಷ್ಮೀನಾರಾಯಣ್ ಕಟ್ಟಾ ಮಾರ್ಕ್ಸ್‌ವಾದಿಯಾಗಿಯೇ ಬದುಕಿ ಡಾ.ಬಿ.ಆರ್.ಅಂಬೇಡ್ಕರ್ ಅವರ ತಾತ್ವಿಕತೆಯನ್ನು ಒಪ್ಪಿಕೊಂಡು, ಯುವ ಪೀಳಿಗೆಯಲ್ಲಿ ಮಾರ್ಕ್ಸ್ ಮತ್ತು ಅಂಬೇಡ್ಕರ್ ಅವರನ್ನು ಅಧ್ಯಯನ ಮಾಡುವಂತೆ ಪ್ರಚೋದಿಸುತ್ತಿದ್ದರು. ಅಲ್ಲದೇ ಕಮ್ಯುನಿಸ್ಟರು ಅಂಬೇಡ್ಕರ್ ಅವರ ನೈಜ ವಾರಸುದಾರರಾಗಿರಬೇಕು ಎಂದು ಪ್ರತಿಪಾದಿಸುತ್ತಿದ್ದರು ಎಂದರು.

ಅಂತಿಮ ಉಸಿರಿರುವವರೆಗೂ ಮಾರ್ಕ್ಸ್‌ವಾದ, ಅಂಬೇಡ್ಕರ್ ವಿಚಾರಧಾರೆಗಳಿಗೆ ಬದ್ಧರಾಗಿದ್ದುಕೊಂಡು ಎಲ್ಲ ರೀತಿಯ ಸಾಮಾಜಿಕ ಅನ್ಯಾಯಗಳ ವಿರುದ್ಧ ಪ್ರಖರ ದನಿಯಾಗಿದ್ದ ಡಾ.ವಿ.ಲಕ್ಷ್ಮೀನಾರಾಯಣ್ ಅವರ ನಿಧನ ಜನಪರ ಹೋರಾಟಗಳ ನಡುವೆ ಒಂದು ಶೂನ್ಯ ಸೃಷ್ಟಿಸಿದೆ. ಡಾ.ವಿ.ಲಕ್ಷ್ಮೀನಾರಾಯಣ್ ಅವರಿಗೆ ಮೈಸೂರಿನ ಜನತೆಯ ಪರವಾಗಿ ಮೇ.೨ ರಂದು ಹಮ್ಮಿಕೊಂಡಿರುವ ನುಡಿನಮನ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮೈಸೂರಿನ ಜನತೆ, ಎಲ್ಲ ಪ್ರಗತಿಪರ ಮನಸುಗಳು ಪಾಲ್ಗೊಂಡು ಮೃತರಿಗೆ ಅಂತಿಮ ನಮನಗಳನ್ನು ಸಲ್ಲಿಸೋಣ ಎಂದರು.

ಸಾಹಿತಿ ನಾ.ದಿವಾಕರ, ನಿವೃತ್ತ ವಿಜ್ಞಾನಿಡಾ.ವಿ.ಜಗನ್ನಾಥ್, ಜವರಯ್ಯ, ಬಿ.ಆರ್.ರಂಗಸ್ವಾಮಿ, ಡಾ.ಟಿ.ಪದ್ಮಶ್ರೀ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.