ಮೈಸೂರು : ಬೆಳೆದು ನಿಂತಿದ್ದ 40 ಮರಗಳನ್ನು ಕಳೆದ ಏಪ್ರಿಲ್‌ನಲ್ಲಿ ಕಡಿದು ಹಾಕಿದ್ದ ಹೈದರ್ ಆಲಿ ರಸ್ತೆಯಲ್ಲಿ ಗುರುವಾರ ರಸ್ತೆ ಕಾಮಗಾರಿ ಆರಂಭಿಸಲಾಗಿದ್ದು, ಈ ವೇಳೆ ಕಡಿದ ಮರಗಳಿಗೆ ಪರ್ಯಾಯವಾಗಿ ಸಸಿ ನೆಟ್ಟಿರುವ ಪುರಾವೆ ನೀಡುವಂತೆ ಒತ್ತಾಯಿಸಿ, ಪರಿಸರವಾದಿಗಳು ಕೆಲಕಾಲ ಕಾಮಗಾರಿಯನ್ನು ಸ್ಥಗಿತಗೊಳಿಸಿದ ಘಟನೆ ನಡೆಯಿತು.
ಕಳೆದ ಎರಡು ದಿನಗಳಿಂದ ಮೈಸೂರು ನಗರ ಪಾಲಿಕೆ ವತಿಯಿಂದ ರಸ್ತೆ ಅಗಲೀಕರಣ ಕಾರ್ಯವನ್ನು ಆರಂಭಿಸಿದೆ. ಅಲ್ಲಿ ಈಗಾಗಲೇ ರಸ್ತೆಯ ಒಂದು ಬದಿಯಲ್ಲಿ ಅಗೆಯಲಾಗಿದ್ದು, ಜಲ್ಲಿ, ಮಣ್ಣನ್ನು ತಂದು ಹಾಕಲಾಗಿದೆ.
ಈ ವಿಚಾರ ಅರಿತ ಮೈಸೂರು ಗ್ರಹಕರ ಪರಿಷತ್ತಿನ ಕಾರ್ಯಕರ್ತರು ಹಾಗೂ ಅಧ್ಯಕ್ಷ ಡಾ.ಭಾಮಿ ವಿ. ಶೆಣೈ, ರಾಜ್ಯ ಪರಿಸರ ಕ್ರಿಯಾ ಸಮಿತಿ ರಾಜ್ಯಾಧ್ಯಕ್ಷ ಮತ್ತು ಮಾಜಿ ಶಾಸಕ ಎ.ಟಿ.ರಾಮಸ್ವಾಮಿ, ಮೈಸೂರು ಜಿಲ್ಲಾ ಪರಿಸರ ಸಮಿತಿ ಅಧ್ಯಕ್ಷ ಪರಶುರಾಮೇಗೌಡ ಮತ್ತು ಇತರರು ಹಸಿರು ಟೋಪಿ ಧರಿಸಿ ದಿಢೀರ್ ಪ್ರತಿಭಟನೆ ನಡೆಸಿದರು.
ಈ ವೇಳೆ ನಗರಪಾಲಿಕೆ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು, ಕಡಿದಿರುವ ಮರಗಳಿಗೆ ಪರ್ಯಾಯವಾಗಿ ಒಂದಕ್ಕೆ ಹತ್ತರಷ್ಟು ಸಸಿಗಳನ್ನು ನೆಟ್ಟಿರುವುದಕ್ಕೆ ಪುರಾವೆಗಳನ್ನು ಒದಗಿಸಿದ ನಂತರವೇ ಕಾಮಗಾರಿಗಳನ್ನು ಪುನರಾರಂಭಿಸಬೇಕೆಂದು ಒತ್ತಾಯಿಸಿದರು.
ಹೈದರ್ ಅಲಿ ರಸ್ತೆಯಲ್ಲಿ ಮತ್ತೆ ಹಸಿರು ಕಾಣಬೇಕು. ರಸ್ತೆ ಅಗಲವಾಗಿರುವುದರಿಂದ ಮತ್ತೆ ರಸ್ತೆ ಅಗಲೀಕರಣ ಕಾಮಗಾರಿ ಬೇಡ. ಕೂಡಲೇ ಕಾಮಗಾರಿಯನ್ನು ನಿಲ್ಲಿಸಿ ಅಲ್ಲಿನ ಎರಡೂ ಬದಿಯಲ್ಲಿ ಸಸಿಗಳನ್ನು ನೆಡುವಂತೆ ಎಂಜಿಪಿ ಸದಸ್ಯರು ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ನಗರಪಾಲಿಕೆ ಅಧಿಕಾರಿಗಳು, ಇಲ್ಲಿ ಬಾಕ್ಸ್ ಮಾದರಿಯ ಚರಂಡಿಗಳ ನಿರ್ಮಾಣಕ್ಕಾಗಿ ಭೂಮಿಯನ್ನು ಸಮತಟ್ಟು ಮಾಡುವ ಕೆಲಸವನ್ನು ಪ್ರಾರಂಭಿಸಿದೆ. ನಂತರದ ಹಂತಗಳಲ್ಲಿ, ಎರಡೂ ಬದಿಗಳಲ್ಲಿ ಪಾದಚಾರಿ ಮಾರ್ಗಗಳು, ಬೀದಿ ದೀಪಗಳು ಮತ್ತು ಡಾಂಬರೀಕರಣವನ್ನು ಯೋಜಿಸಲಾಗಿದೆ ಎಂದರು.
ಅಂದಾಜು ವೆಚ್ಚ 4 ಕೋಟಿ ರೂ. ವೆಚ್ಚದಲ್ಲಿ ಕೆಲಸ ಆರಂಭಿಸಲಾಗಿದೆ. ಆರು ತಿಂಗಳುಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಅಷ್ಟರಲ್ಲಿ ರಸ್ತೆಯ ಎರಡೂ ಬದಿ ಹಾಗೂ ಮದ್ಯಭಾಗದಲ್ಲಿ ಒಟ್ಟು 130 ಸಸಿಗಳನ್ನು ನಡೆಲಾಗುವುದು. ಉಳಿದಂತೆ 370 ಗಿಡಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಅವರ ವ್ಯಾಪ್ತಿಯಲ್ಲಿ ನೆಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಅವರ ಮಾತಿಗೆ ಒಪ್ಪದ ಪರಿಸರವಾದಿಗಳು ನೀವು ಸರ್ವೋಚ್ಚ ನ್ಯಾಯಾಲಯದ ನಿಯಮಗಳನ್ನು ಉಲ್ಲಂಘಿಸಿ ರಸ್ತೆ ಕಾಮಗಾರಿಯನ್ನು ನಡೆಸುತ್ತಿದ್ದೀರಿ. ಈ ಸಂಬಂದ ನಾವುಗಳು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮ್ಮೆ ಹೂಡುತ್ತೇವೆ. ಈ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ವಾದಿಸಿದರು. ಪ್ರತಿಭಟನೆಯಲ್ಲಿ ಸಿಂಧುವಳ್ಳಿ ಅಕ್ಬರ್, ಗಂಗಾವತಿ ಮತ್ತು ಇತರ ಕಾರ್ಯಕರ್ತರು ಭಾಗವಹಿಸಿದ್ದರು.





