ಮೈಸೂರು: ಎಟಿಎಂಗೆ ವರ್ಗಾಯಿಸಬೇಕಿದ್ದ ಹಣವನ್ನು ಕಳ್ಳತನ ಮಾಡಿ ಆ ಹಣದಿಂದ ತನ್ನ ಪ್ರೇಯಸಿಗೆ ಚಿನ್ನ ಖರೀದಿ ಮಾಡಿದ್ದ ಆರೋಪಿಯನ್ನು ಬಿಳಿಕೆರೆ ಪೊಲೀಸ್ ಠಾಣಾ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಹೌದು! ಈ ಘಟನೆಯೂ ಜಿಲ್ಲೆಯ ಹುಣಸೂರು ತಾಲ್ಲೂಕಿನ ಗದ್ದಿಗೆ ಗ್ರಾಮದಲ್ಲಿ ನಡೆದಿದ್ದು, ಇಲ್ಲಿನ ಎಟಿಎಂಗೆ 5.80 ಲಕ್ಷ ರೂಪಾಯಿಗಳನ್ನು ವರ್ಗಾಯಿಸಬೇಕಿತ್ತು. ಆದರೆ ಈ ಹಣವನ್ನು ಎಟಿಎಂಗೆ ವರ್ಗಾಯಿಸದೇ ತನ್ನ ಪ್ರಿಯತಮೆಗೆ ಬಂಗಾರದ ಉಡುಗೊರೆ ನೀಡಲು ಈ ಹಣವನ್ನೇ ಕದ್ದಿದ್ದಾನೆ.
ಈ ಘಟನೆಗೆ ಕಾರಣನಾದವನನ್ನು ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ ತುರುಗನೂರಿನ ಅಕ್ಷಯ್ ಎಂಬಾತ ಎಂಬಾತ ಎಂದು ಗುರುತಿಸಲಾಗಿದೆ. ಈತ ಮೈಸೂರಿನ ಟಿ.ಎಲ್.ಎಂಟರ್ ಪ್ರೈಸಸ್‌ನಲ್ಲಿ ಕೆಲಸ ಮಾಡುತ್ತಿದ್ದು, 16 ಎಟಿಎಂಗಳಿಗೆ ಹಣ ತುಂಬುವ ಕೆಲಸವನ್ನು ಕಂಪೆನಿಯೂ ಅಕ್ಷಯ್‌ಗೆ ನೀಡಿತ್ತು. ಆದರೆ ಈತ ಕಂಪೆನಿಯಿಂದ ಹಣ ಪಡೆದು ಗದ್ದಿಗೆಯ ಎಟಿಎಂಗೆ ಹಣ ತುಂಬುವಂತೆ ನಾಟಕವಾಡಿ 5.80 ಲಕ್ಷ ರೂ ತನ್ನ ಬ್ಯಾಗಿಗಿಳಿಸಿಕೊಂಡು ಎಸ್ಕೇಪ್ ಆಗಿದ್ದ. ಬಳಿಕ ತನ್ನ ಪ್ರೇಯಸಿ ತೇಜಸ್ವಿನಿಗೆ ಚಿನ್ನ ಕೊಡಿಸಿದ್ದನು. ಈ ವಿಚಾರದ ತಿಳಿದ ಕೂಡಲೇ ಬಿಳಿಕೆರೆ ಪೊಲೀಸರು ಆರೋಪಿಗಾಗಿ ಕಾರ್ಯಾಚರಣೆಯಲ್ಲಿ ತೊಡಗಿದ್ದರು.
ಇನ್ನೂ ಆರೋಪಿ ಅಕ್ಷಯ್ ತನ್ನ ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಿದ್ದ ಸಂದರ್ಭದಲ್ಲಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು, ತಕ್ಷಣ ಆತನನ್ನು ಬಿಳಿಕೆರೆ ಪೊಲೀಸರು ಬಂಧಿಸಿದ್ದಾರೆ. ಬಳಿಕ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.