ಮೈಸೂರು: ‘ಸಾಂಸ್ಕೃತಿಕ ನಗರಿ’ ಮೈಸೂರಿನ ಹಸಿರು ಮರಗಳು ಹಾಗೂ ಜನರ ಮನಸ್ಸಿನಲ್ಲಿ ಸಾಲುಮರದ ತಿಮ್ಮಕ್ಕನ ನೆನಪುಗಳು ಬೇರೂರಿದ್ದು, ಅದಕ್ಕೆ ಸಾಕ್ಷಿಯಂತಿವೆ ನಗರದಲ್ಲಿರುವ ತಿಮ್ಮಕ್ಕನ ಹೆಸರಿನಲ್ಲಿರುವ ಉದ್ಯಾನಗಳು..!
ಮಕ್ಕಳಿಲ್ಲದ ತಿಮ್ಮಕ್ಕ 8 ಸಾವಿರಕ್ಕೂ ಹೆಚ್ಚು ಸಸಿಗಳನ್ನು ತಮ್ಮ ಮಕ್ಕಳಂತೆ ಪೋಷಿಸಿ ಬೃಹತ್ ಮರಗಳನ್ನಾಗಿ ಬೆಳೆಸಿದ್ದಾರೆ. ಅಲ್ಲದೇ, ಪರಿಸರ ಸಂರಕ್ಷಣೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ವೃಕ್ಷಮಾತೆ ತಿಮ್ಮಕ್ಕನಿಗೂ ಮೈಸೂರಿನ ಮರಗಳಿಗೂ ಅವಿನಾಭಾವ ನಂಟಿದೆ.
ನಗರದ ಇಸ್ಕಾನ್ ಬಳಿ ಅರಣ್ಯ ಇಲಾಖೆ ನಿರ್ಮಿಸಿರುವ ಉದ್ಯಾನಕ್ಕೆ ‘ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ’ ಎಂದು ಹೆಸರಿಡಲಾಗಿದೆ. ಅಲ್ಲದೇ, ಲಿಂಗಾಂಬುಧಿ ಕೆರೆ ಮುಂಭಾಗ ಇರುವ ಉದ್ಯಾನಕ್ಕೂ ಸಾಲುಮರದ ತಿಮ್ಮಕ್ಕ ಪಾರ್ಕ್ ಎಂದು ನಾಮಕರಣ ಮಾಡಲಾಗಿದೆ. ಇಲ್ಲಿಗೆ ಬರುವ ವಾಯುವಿಹಾರಿಗಳು ನಿತ್ಯ ತಿಮ್ಮಕ್ಕನನ್ನು ಸ್ಮರಿಸುತ್ತಲೇ ವಾಕಿಂಗ್ ಮಾಡುತ್ತಾರೆ.
ಕಳೆದ ವರ್ಷ ನಿವೇದಿತಾನಗರದ ಮನೆಯೊಂದಕ್ಕೆ ಆಗಮಿಸಿ ಸಸಿಗಳನ್ನು ನೆಡುವ ಮೂಲಕ ಸನ್ಮಾನ ಸ್ವೀಕರಿಸಿದ್ದರು. 2016ರಲ್ಲಿ ನಾಡಹಬ್ಬ ದಸರಾ ಮಹೋತ್ಸವ ಉದ್ಘಾಟನೆಗೆ ಆಹ್ವಾನಿಸಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಒತ್ತಡ ಬಂದಿತ್ತು. ಆದರೆ, ಅವರಿಂದ ಒಮ್ಮೆಯಾದರೂ ದಸರಾ ಉದ್ಘಾಟಿಸಬೇಕೆಂಬ ಮೈಸೂರಿಗರ ಕನಸು ಕನಸಾಗಿಯೇ ಉಳಿಯಿತು.




