ಮೈಸೂರು: ಕುಕ್ಕರಹಳ್ಳಿ ಕೆರೆಯನ್ನು ಪರಿಶೀಲನೆ ನಡೆಸಿದ್ದ ಕಾವೇರಿ ನೀರಾವರಿ ನಿಗಮದ ಡಿಸೈನ್ ವಿಂಗ್‌ನ ತಾಂತ್ರಿಕ ಸಲಹೆಗಾರ ಎಚ್.ಕೆ.ಸಂಪತ್ ಕುಮಾರ್ ನೇತೃತ್ವದ ತಂಡ ವರದಿಯನ್ನು ಸಿದ್ಧ ಪಡಿಸಿದೆ.
ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಕೇಂದ್ರದ ಇಂಜಿನಿಯರ್‌ಗಳು ಕುಕ್ಕರಹಳ್ಳಿ ಕೆರೆಯ ಮಣ್ಣಿನ ಪರೀಕ್ಷೆ ನಡೆಸಿ ನೀಡುವ ವರದಿಯ ಜೊತೆಗೆ ಡಿಸೈನ್ ವಿಂಗ್‌ನ ತಂಡವು ಮೈಸೂರು ವಿಶ್ವವಿದ್ಯಾನಿಲಯಕ್ಕೆ ವರದಿಯನ್ನು ಸಲ್ಲಿಸಲಿದೆ. ಈ ತಂಡವು ಅ.31 ರಂದು ಕೆರೆಯನ್ನು ಪರಿಶೀಲನೆ ನಡೆಸಿತ್ತು.
ತುರ್ತು ಸಮಯದಲ್ಲಿ ಕೆರೆಯಲ್ಲಿನ ಪ್ರವಾಹವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಮತ್ತು ನೀರನ್ನು ಹೊರಹಾಕಲು ಸ್ಲೂಸೈ ಗೇಟ್ ಹೊರತುಪಡಿಸಿ ಮತ್ಯಾವುದೇ ಪರಿಣಾಮಕಾರಿ ವ್ಯವಸ್ಥೆ ಇಲ್ಲ. ಹೀಗಾಗಿ ಹೆಡ್ ರೆಗ್ಯುಲೇಟರ್ ಅನ್ನು ಅಳವಡಿಸಬೇಕು. ಇದನ್ನು ಅಳವಡಿಸಲು ಸೂಚಿಸಿರುವ ಜಾಗದಲ್ಲಿ ಎಸ್‌ಬಿಸಿ ಪರೀಕ್ಷೆ ಮತ್ತು ಮಣ್ಣಿನ ವರ್ಗೀಕರಣದ ವರದಿಯನ್ನು ಒದಗಿಸುವ ಅಗತ್ಯವಿದೆ ಎಂದು ತಿಳಿಸಲಾಗಿದೆ.
ಕೆರೆಯ ಬಂಡ್‌ನ ಮಣ್ಣಿನ ವರ್ಗೀಕರಣ, ತೇವಾಂಶ, ಸಾಂದ್ರತೆ, ಪ್ರವೇಶ ಸಾಧ್ಯತೆ ಮತ್ತು ನಿರ್ದಿಷ್ಟ ಗುರುತ್ವಾಕರ್ಷಣೆಯಂತಹ ಮಣ್ಣಿನ ನಿಯತಾಂಕಗಳ ಫಲಿತಾಂಶದ ವರದಿಯನ್ನು ಕೆಇಆರ್‌ಎಸ್‌ನಿಂದ ಪಡೆಯಲು ತಿಳಿಸಿದೆ. ಡೌನ್‌ಸ್ಟ್ರೀಮ್ ಬಂಡ್‌ನಲ್ಲಿ ತೇವವನ್ನು ಕಡಿಮೆ ಮಾಡಲು ಮತ್ತು ತಕ್ಷಣದ ಸುರಕ್ಷತಾ ಕ್ರಮವಾಗಿ ಸೋರಿಕೆಯಾಗುವ ನೀರನ್ನು ಸುರಕ್ಷಿತವಾಗಿ ಹೊರಹಾಕಲು ಬಂಡ್‌ನ ಕೆಳಭಾಗದಲ್ಲಿ ರಾಕ್ ಟೋ ನಿರ್ಮಿಸಲು ಸೂಚಿಸಿದೆ. ಕುಕ್ಕರಹಳ್ಳಿ ಕೆರೆ ನೀರು ಮತ್ತು ಲಿಂಗಾಂಬುಧಿ ಕೆರೆಯ ನೀರು ಒಟ್ಟಿಗೆ ಸೇರಿ ಹರಿಯಲಿದ್ದು, ಇದು ಹರಿಯವ ಕಾಲುವೆಯ ರೇಖಾಚಿತ್ರವನ್ನು ಒದಗಿಸುವಂತೆ ಕೇಳಿರುವ ಅಂಶಗಳನ್ನು ವರದಿ ಒಳಗೊಂಡಿದೆ.





