ಹಾಸನ: ವರ್ಷಕ್ಕೊಮ್ಮೆ ದರ್ಶನ ನೀಡುವ ತಾಯಿ ಹಾಸನಾಂಬೆಯ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆತಿದೆ.
ಹಾಸನದಲ್ಲಿ ಗುರುವಾರ ಮಧ್ಯಾಹ್ನ 12 ಗಂಟೆ 28 ನಿಮಿಷಕ್ಕೆ ದೇವಿಯ ಗರ್ಭಗುಡಿ ಬಾಗಿಲನ್ನು ಶಾಸ್ತ್ರೋಕ್ತವಾಗಿ ತೆರೆಯಲಾಯಿತು. ಇದಕ್ಕೂ ಮುನ್ನ ಅರಸು ವಂಶಸ್ಥ ನಂಜರಾಜೆ ಅರಸ್ ಸಂಪ್ರದಾಯದಂತೆ ಬಾಳೆಕಂಬ ಕಡಿದರು.
ಸ್ವಾಮೀಜಿಗಳು, ಗಣ್ಯರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಈ ವೇಳೆ ನೆರೆದಿದ್ದ ಭಕ್ತರು ‘ಹಾಸನಾಂಬೆಗೆ ಜಯವಾಗಲಿ’ ಎಂದು ಜಯಘೋಷ ಮೊಳಗಿಸಿದರು.
ನಾಳೆಯಿಂದ ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ರಾಜ್ಯ ಹಾಗೂ ಹೊರರಾಜ್ಯಗಳಿಂದ ಆಗಮಿಸುವ ಭಕ್ತರಿಗೆ ಮಳೆ–ಬಿಸಿಲಿನಿಂದ ರಕ್ಷಣೆ ನೀಡಲು ದೇಗುಲದ ಹೊರಗೆ ಟೆಂಟ್ ವ್ಯವಸ್ಥೆ ಮಾಡಲಾಗಿದೆ.




