ಮೈಸೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ನಿರಂತರವಾಗಿ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿದ್ದರೂ ಅದನ್ನು ತಡೆಯುವಲ್ಲಿ ಗೃಹಸಚಿವ ಡಾ.ಜಿ.ಪರಮೇಶ್ವರ್ ವಿಫಲರಾಗಿದ್ದಾರೆ ಎಂದು ಶಾಸಕ ಟಿ.ಎಸ್. ಶ್ರೀವತ್ಸ ಆರೋಪಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಇಂದು(ಜನವರಿ.24) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಗರಣ, ದರೋಡೆ ಪ್ರಕರಣಗಳು ಹೆಚ್ಚಾಗಿದ್ದು, ಗೃಹ ಇಲಾಖೆಯು ನಿದ್ರೆ ಮಾಡುತ್ತಿದೆ ಎಂಬಂತೆ ಕಾಣುತ್ತಿದೆ. ಗೃಹ ಸಚಿವ ಜಿ.ಪರಮೇಶ್ವರ್ ಅವರನ್ನು ಎದ್ದೇಳು ಪರಮೇಶ್ವರ ಎನ್ನಬೇಕಾದ ಸ್ಥಿತಿ ನಿರ್ವಾಣವಾಗಿದೆ. ದಿನಕ್ಕೊಂದು ಕೊಲೆ, ಅತ್ಯಾಚಾರ ಹಾಗೂ ಡ್ರಗ್ ಮಾಫೀಯಾಗಳು ನಡೆಯುತ್ತಿದೆ. ಅಲ್ಲದೇ ರಾಜ್ಯ ಸರ್ಕಾರ ದಿವಾಳಿಯತ್ತ ಸಾಗುತ್ತಿದೆ ಎಂಬ ಅನುಮಾನ ಮೂಡುತ್ತಿದೆ. ಹೀಗಾಗಿ ಗೃಹ ಇಲಾಖೆ ಈಗಲಾದರೂ ಎಚ್ಚೆತ್ತುಕೊಂಡು ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು. ಜೊತೆಗೆ ಪೊಲೀಸರನ್ನು ರಾಜಕೀಯದಿಂದ ಮುಕ್ತಗೊಳಿಸಿ, ಒಳ್ಳೆಯ ಅಧಿಕಾರಿಗಳನ್ನು ನಿಯೋಜಿಸಬೇಕು ಎಂದು ಹೇಳಿದರು.
ಇನ್ನು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅನೇಕ ಇಲಾಖೆಗಳು ಅಧೋಗತಿಗೆ ಹೋಗಿ ಹಗರಣಗಳಲ್ಲಿ ಸಿಲುಕಿಕೊಂಡಿದೆ. ವಾಲ್ಮೀಕಿ ನಿಗಮ, ಮುಡಾ ಮತ್ತು ಅಬಕಾರಿ ಇಲಾಖೆಯಲ್ಲಿ ಹಗರಣ ನಡೆದಿದೆ. ಅಲ್ಲದೇ ಗುತ್ತಿಗೆದಾರರ ಸಂಘದವರ ಆರೋಪದಂತೆ, ಸಚಿವರು, ಶಾಸಕರುಗಳ ಮೇಲಿನ ಆರೋಪ ಮಿತಿ ಮೀರಿದೆ. ಕಳೆದ ಒಂದೂವರೆ ವರ್ಷದಿಂದ ತಿಂಗಳಿಗೊಂದು ಹಗರಣ ನಡೆಯುತ್ತಿವೆ ಎಂದು ಆರೋಪಿಸಿದರು.
ನಗರ ಪ್ರದೇಶದ ಅಭಿವೃದ್ಧಿಗೆ ಹಣ ಇಲ್ಲ
ರಾಜ್ಯ ಸರ್ಕಾರದ ಪ್ರಸ್ತುತ ಸ್ಥಿತಿ ಹೇಗಾಗಿದೆ ಎಂದರೆ ಯಾವುದಕ್ಕೂ ಹಣವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಸಿಎಂ ಸಿದ್ದರಾಮಯ್ಯ ಅವರು 4 ಸಾವಿರ ಕೋಟಿ ರೂ. ಸಾಲ ಪಡೆದು ಪ್ರತಿ ಕ್ಷೇತ್ರಕ್ಕೂ 10-20 ಕೋಟಿ ರೂ. ಅನುದಾನ ನೀಡುತ್ತೇವೆ ಎಂದು ಹೇಳಿದ್ದರು. ಆದರೆ ನಗರ ಪ್ರದೇಶಕ್ಕೆ ಹಣ ನೀಡಿಲ್ಲ, ಗ್ರಾಮೀಣ ಭಾಗಕ್ಕೆ ಮಾತ್ರ ನೀಡಿದ್ದಾರೆ. ಹೀಗಾಗಿ ಕೆ.ಆರ್.ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ.
ಇನ್ನೂ ವಿವಿಧ ಸಮಾಜದ ಅಭಿವೃದ್ಧಿ ನಿಗಮಗಳಿಗೆ ಅನುದಾನದ ಕೊರತೆ ಎದುರಾಗಿದ್ದು, ಹಲವು ಯೋಜನೆಗಳಿಗೆ ಹಣ ಇಲ್ಲ. ಹಿಂದುಳಿದ ವರ್ಗದ ಅಭಿವೃದ್ಧಿಗೆ ನಮ್ಮ ಸರ್ಕಾರ ಸಾಕಷ್ಟು ಹಣ ನೀಡಿತ್ತು. ಆದರೆ, ಈಗಿನ ಸರ್ಕಾರ ನೀಡಿಲ್ಲ. ಇದೆಲ್ಲವನ್ನು ಮುಚ್ಚಿಕೊಳ್ಳಲು ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ಮಾಡಲಾಗಿದೆ. ಈಗ ಇರುವುದು ಅಸಲಿ ಕಾಂಗ್ರೆಸ್ ಅಲ್ಲ. ಆಗಿನ ಕಾಂಗ್ರೆಸ್ ವಿಸರ್ಜಿಸಬೇಕು ಎಂದು ತೀರ್ಮಾನವಾಗಿತ್ತು. ಆದರೆ ಅದು ಕಾರ್ಯರೂಪಕ್ಕೆ ಬಂದಿಲ್ಲ, ಹೀಗಾಗಿ ಈಗಿನ ಕಾಂಗ್ರೆಸ್ ನಕಲಿಯಾಗಿದೆ ಎಂದರು.
ರಾಜವಂಶಸ್ಥರನ್ನು ನಕಲಿ ಎಂದ ಕಾಂಗ್ರೆಸ್ ವಕ್ತಾರರಿಗೆ ಅಸಲಿ ಯಾವುದು, ನಕಲಿ ಯಾವುದೆಂಬ ಸತ್ಯವೇ ಗೊತ್ತಿಲ್ಲ. ರಾಜವಂಶದ ಬಗ್ಗೆ ಮಾಹಿತಿ ಇಲ್ಲದೆ ರಾಜವಂಶಸ್ಥ ಯದುವೀರ್ ಅವರನ್ನು ನಕಲಿ ಎಂದಿದ್ದರು. ಆದರೆ, ಅವರು ಇರುವ ಪಕ್ಷವೇ ನಕಲಿ ಎಂದು ಅವರಿಗೆ ತಿಳಿದಿಲ್ಲ ಎಂದು ಎಂ.ಲಕ್ಷ್ಮಣ್ ಹೆಸರು ಹೇಳದೆ ವ್ಯಂಗ್ಯವಾಡಿದ್ದಾರೆ.
ವಕ್ಫ್ ಮಾದರಿ ಹೋರಾಟ
ಆರು ತಿಂಗಳ ಹಿಂದೆಯೇ ರೈತರ ಮನೆಗೆ ಸಾಲ ವಸೂಲಿಗೆ ಹೋಗಬೇಡಿ ಎಂದು ಸೂಚಿಸಲಾಗಿದೆ. ಆದರೆ, ಅಧಿಕಾರಿಗಳು ಸಚಿವರು ಮತ್ತು ಶಾಸಕರ ಮಾತು ಕೇಳುತ್ತಿಲ್ಲ. ಅವರಿಗೆ ಭಯವೇ ಇಲ್ಲದಂತಾಗಿದೆ. ನಾವು ವಕ್ಛ್ ಮಾದರಿಯಲ್ಲಿ ಮೈಕ್ರೊ ಫೈನಾನ್ಸ್‌ಗಳ ವಿರುದ್ಧ ಹೋರಾಟ ಮಾಡಿ ನ್ಯಾಯ ಕೊಡಿಸುವ ಕೆಲಸ ವಾಡುತ್ತೇವೆ. ಅಲ್ಲದೇ ಬಜೆಟ್‌ನಲ್ಲಿ ಜಿಲ್ಲೆಗೆ ಹಲವಾರು ಕೊಡುಗೆ ನೀಡಬೇಕು ಎಂದು ಒತ್ತಾಯ ಮಾಡಲಾಗಿದೆ. ಅದಕ್ಕೆ ಪೂರಕವಾಗಿ ಏನು ಕೊಡುತ್ತಾರೆ ಎಂದು ಗೊತ್ತಿಲ್ಲ. ಜೊತೆಗೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಮಹಿಳಾ ಪಾಲಿಟೆಕ್ನಿಕ್ ಕಾಲೇಜು ಆರಂಭಿಸಲು ಮನವಿ ವಾಡಿದ್ದೇವೆ. ರಸ್ತೆಗಳಿಗೆ ವೈಟ್ ಟ್ಯಾಪಿಂಗ್ ವಾಡಲು ಸಂಪುಟದಲ್ಲಿ ಅನುಮೋದನೆ ಆಗಿದೆ ಎಂದರು.