ಮೈಸೂರು : ತಿ.ನರಸೀಪುರ ತಾಲ್ಲೂಕಿನ ಗರ್ಗೆಶ್ವರಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು, ಅನುಷ್ಠಾನ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಸಿಇಒ ಎಸ್. ಯುಕೇಶ್ ಕುಮಾರ್ ಅವರು ಪ್ರಗತಿ ಪರಿಶೀಲನೆ ಸಭೆ ನಡೆಸಿ ಎಲ್ಲಾ ಯೋಜನೆಗಳಲ್ಲಿ ಪ್ರಗತಿ ಸಾಧಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮನರೇಗಾ ಯೋಜನೆಯಡಿ ಅನುಷ್ಠಾನ ಇಲಾಖೆಗಳಿಗೆ ಹಾಗೂ ಗ್ರಾಮ ಪಂಚಾಯಿತಿಗಳಿಗೆ ನೀಡಿರುವ ಗುರಿಯನ್ನು ನಿಗಧಿತ ಸಮಯದೊಳಗೆ ಪೂರ್ಣಗೊಳಿಸಿ ಹೆಚ್ಚು ಪ್ರಗತಿಯನ್ನು ಸಾಧಿಸಬೇಕೆಂದು ತಿಳಿಸಿದರು. ಮಾನವ ದಿನಗಳನ್ನು ಸೃಜಿಸದೆ ಇರುವ ಗ್ರಾಮ ಪಂಚಾಯಿತಿಗಳು ಕಡ್ಡಾಯವಾಗಿ NMR ಗಳನ್ನು ತೆಗೆದು ಶೀಘ್ರದಲ್ಲಿ ಮಾನವ ದಿನಗಳನ್ನು ಸೃಜಿಸಬೇಕೆಂದು ಸೂಚನೆ ನೀಡಿದರು.
ಅಪೂರ್ಣಗೊಂಡಿರುವ JJM ಯೋಜನೆಯ ಮೊದಲ ಹಂತದ ನಳ ಸಂಪರ್ಕಗಳ ಕಾಮಗಾರಿಗಳು,ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮೇಜರ್ ಟ್ಯಾಂಕ್ ಗಳನ್ನು ನಿರ್ಮಾಣ ಮಾಡುವ ಸಲುವಾಗಿ ಸರ್ಕಾರಿ ಸ್ಥಳವನ್ನು ಪಿಡಿಒಗಳು ಗುರುತಿಸಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ನೀಡಬೇಕು ಹಾಗೂ ಮೇಜರ್ ಟ್ಯಾಂಕ್ ಗಳ ದುರಸ್ಥಿ ಕಾರ್ಯಗಳನ್ನು ಕಾಲಕಾಲಕ್ಕೆ ಮಾಡಬೇಕು. ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯವರು ಗ್ರಾಮ ಪಂಚಾಯಿತಿಗೆ ಶೀಘ್ರವೇ ಹಸ್ತಾಂತರಿಸಬೇಕು ಎಂದರು.
ಅಂಗನವಾಡಿ ಕೇಂದ್ರಗಳ ಕಟ್ಟಡಗಳನ್ನು ಶೀಘ್ರದಲ್ಲೇ ಕಾಮಗಾರಿಗಳನ್ನು ಪೂರ್ಣಗೊಳಿಸಿ ಎಂದು PRED ಇಲಾಖೆಯ AEE ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ AEE ರವರಿಗೆ ಸೂಚನೆ ನೀಡಿದರು. ಗ್ರಾಮಗಳಲ್ಲಿನ ಕೆರೆಗಳಲ್ಲಿ ಮೀನು ಸಾಕಣೆ ಮಾಡುವ ಕುರಿತು ಹರಾಜು ಪ್ರಕ್ರಿಯೆಯನ್ನು ಜೂನ್ ತಿಂಗಳ ಒಳಗಾಗಿ ನಡೆಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಿದರು.
ಕೂಸಿನ ಮನೆ, ಸ್ವಚ್ಛ ಭಾರತ್ ಮಿಷನ್ ಅಡಿಯ IHHL, ಘನ ತ್ಯಾಜ್ಯ ವಿಲೇವಾರಿ ಘಟಕದ ನಿರ್ವಹಣೆ, ಕಸ ಸಂಗ್ರಹಣೆ, ಬೂದು ನೀರು ನಿರ್ವಹಣೆ ಕಾಮಗಾರಿಗಳು, ವಸತಿ ಯೋಜನೆಯಡಿಯ ಮನೆಗಳ ಪ್ರಗತಿ, ಕರ ವಸೂಲಾತಿ, ಸಕಾಲ, ಮಹಿಳಾ ಗ್ರಾಮ ಸಭೆ ಹಾಗೂ ಇತರೆ ಯೋಜನೆಗಳ ಪ್ರಗತಿಯನ್ನು ಸಾಧಿಸುವಂತೆ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.
ಈ ವೇಳೆ ತಾ. ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಾದ ಅನಂತರಾಜು. ಪಿ. ಎಸ್, ಸಹಾಯಕ ನಿರ್ದೇಶಕರು (ಗ್ರಾ. ಉ), ತಾಲ್ಲೂಕು ಯೋಜನಾಧಿಕಾರಿ ಡಾ. ಕೆ. ರಂಗಸ್ವಾಮಿ, PRED AEE, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ AEE, RFO, ಸಿಡಿಪಿಓ, ಬಿಇಓ, ಅನುಷ್ಠಾನ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಪಿಡಿಒಗಳು, ತಾ.ಪಂ. ಯ ತಾಂತ್ರಿಕ ಸಿಬಂದಿಗಳು, ತಾಲ್ಲೂಕು ಐ ಇ ಸಿ ಸಂಯೋಜಕರು, ಹಾಗೂ ಸಿಬ್ಬಂದಿಗಳು ಹಾಜರಿದ್ದರು.





