ಮೈಸೂರು : ಆರ್ಥಿಕವಾಗಿ ಹಿಂದುಳಿದಿರುವ ಅಲ್ಪಸಂಖ್ಯಾತ ಸಮುದಾಯದವರ ಸರಳ ವಿವಾಹಕ್ಕೆ ಪ್ರತಿ ಜೋಡಿಗೆ 50,000/-ರೂ. ಸಹಾಯಧನ ನೀಡಲಾಗುವುದು ಎಂದು ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸರಳ ವಿವಾಹದ ಪ್ರೋತ್ಸಾಹಧನ ಕಾರ್ಯಕ್ರಮದ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಮೈಸೂರು ಜಿಲ್ಲೆಗೆ 150 ಗುರಿ ನಿಗಧಿ ಪಡಿಸಲಾಗಿದ್ದು, ಸರಳ ವಿವಾಹ ಯೋಜನೆಯನ್ನು ಅರ್ಹ ಫಲಾನುಭವಿಗಳನ್ನು ಗುರುತಿಸಬೇಕು ಎಂದರು.
ಅರ್ಜಿ ಸಲ್ಲಿಸುವ ಅಲ್ಪಸಂಖ್ಯಾತ ವಧುವಿಗೆ ಕನಿಷ್ಠ 18 ವರ್ಷದಿಂದ ಗರಿಷ್ಠ 42 ವರ್ಷಗಳು ಹಾಗೂ ವರನಿಗೆ ಕನಿಷ್ಠ 21 ವರ್ಷದಿಂದ ಗರಿಷ್ಠ 45 ವರ್ಷ ವಯಸ್ಸಾಗಿರಬೇಕು. ಯಾವುದೇ ಬಾಲ್ಯವಿವಾಹಕ್ಕೆ ಆಸ್ಪದ ಕೊಡದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎಂದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಈ ಯೋಜನೆಗಾಗಿ ಫಲಾನುಭವಿಗಳನ್ನು ಗುರುತಿಸಲು ಹೆಚ್ಚಿನ ಶ್ರಮ ವಹಿಸಿ ಕೆಲಸ ನಿರ್ವಹಿಸಬೇಕು. ತಂದೆ ಅಥವಾ ತಾಯಿ ಇಲ್ಲದ ವಧುವನ್ನು ಗುರುತಿಸಿ ಸರಳ ವಿವಾಹ ಯೋಜನೆಯ ಸವಲತ್ತು ಒದಗಿಸಿದರೆ ಯೋಜನೆ ಹೆಚ್ಚಿನ ಸಾರ್ಥಕತೆ ಪಡೆಯುತ್ತದೆ ಎಂದರು.
ಇದನ್ನು ಓದಿ: ಮಂಡ್ಯ : ಜಿಲ್ಲೆಗೆ ಎರಡೂವರೆ ವರ್ಷದಲ್ಲಿ 10 ಸಾವಿರ ಕೋಟಿ ಅನುದಾನ : ಸಚಿವ ಚಲುವರಾಯಸ್ವಾಮಿ
ಅಲ್ಪಸಂಖ್ಯಾತ ಸಮುದಾಯದಡಿ ಬರುವ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ದ, ಸಿಖ್ ಹಾಗೂ ಪಾರ್ಸಿ ಅವರಿಗೆ ಸರಳ ವಿವಾಹ ಯೋಜನೆಯಡಿ ಗುರಿ ನಿಗದಿ ಮಾಡಿ ಅರ್ಜಿ ಆಹ್ವಾನಿಸಿ ಹೆಚ್ಚಿನ ಪ್ರಚಾರ ನೀಡಿ ಕೆಲವು ಸಮುದಾಯದಿಂದ ಅರ್ಜಿ ಬರದೇ ಇದ್ದಲ್ಲಿ ನಂತರ ಬೇರೆ ಸಮುದಾಯಕ್ಕೆ ಹೆಚ್ಚುವರಿಯಾಗಿ ನೀಡುವುದು ಉತ್ತಮ ಎಂದರು.
ಸರಳ ವಿವಾಹ ಯೋಜನೆಯಡಿ ಅರ್ಜಿ ಸ್ವೀಕೃತಿಯಾದ ನಂತರ ವಧು ಹಾಗೂ ವರ ನೀಡಿರುವ ವಯಸ್ಸಿನ ದಾಖಲಾತಿಗಳನ್ನು ಪರಿಶೀಲಿಸಿ ಹಾಗೂ ಅವರು ವಾಸವಿರುವ ಸ್ಥಳ ಭೀಟಿ ಮಾಡಿ ವರನಿಗೆ ಜೀವಂತ ಪತ್ನಿ ಹಾಗೂ ವಧುವಿಗೆ ಜೀವಂತ ಪತಿ ಇಲ್ಲದಿರುವುದನ್ನು ಖಾತ್ರಿ ಪಡಿಸಿಕೊಂಡು ನಂತರ ಯೋಜನೆಯ ಸೌಲಭ್ಯ ಒದಗಿಸಿಕೊಡಿ ಎಂದರು.
ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಜಿ ಅವರು ಮಾತನಾಡಿ ವಯೋಮಿತಿಯ ಬಗ್ಗೆ ಪರಿಶೀಲಿಸುವಾಗ ಕಡ್ಡಾಯವಾಗಿ ಎಸ್.ಎಸ್.ಎಲ್.ಸಿ ಅಂಕಪಟ್ಟಿ ಅಥವಾ ಜನನ ಪ್ರಮಾಣ ಪತ್ರದ ಮೂಲಕ ಮಾಡಿ. ವಿವಾಹದ ನೊಂದಣಿಗೆ ನೊಂದಣಾಧಿಕಾರಿಗಳ ಕಚೇರಿಯೊಂದಿಗೆ ಸಮನ್ವಯ ಸಾಧಿಸಿ ವಿವಾಹದ ಸಂದರ್ಭದಲ್ಲಿ ನೊಂದಣಿಗೆ ಕ್ರಮ ಕೈಗೊಳ್ಳಿ ಎಂದರು.
ಸಭೆಯಲ್ಲಿ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಶೇಖ್ ತನ್ವೀರ್ ಅಸೀಫ್, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಶಿಲ್ಪ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ಎಸ್.ಹೆಚ್ ನಿರ್ಮಲಾ ಅವರು ಸೇರಿದಂತೆ ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.





