Mysore
35
few clouds

Social Media

ಶುಕ್ರವಾರ, 28 ಮಾರ್ಚ್ 2025
Light
Dark

ಅಂಬೇಡ್ಕರ್‌ಗೆ ಅವಮಾನ | ಮೈಸೂರಲ್ಲಿ ಅಮಿತ್‌ ಶಾ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ

ಮೈಸೂರು: ಸಂಸತ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಎಸಗಿರುವುದನ್ನು ಖಂಡಿಸಿ ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರ ಸಂಘ ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟಗಳ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಮಾನಸಗಂಗೋತ್ರಿಯ ಕ್ಲಾಕ್ ಟವರ್ ಬಳಿ ಜಮಾಯಿಸಿದ ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಕ್ಲಾಕ್ ಟವರ್ ಸುತ್ತ ಮಾನವ ಸರಪಳಿ ರಚಿಸಿ, ಅಮಿತ್ ಶಾ ವಿರುದ್ಧ ಧಿಕ್ಕಾರಗಳ ಘೋಷಣೆ ಕೂಗಿ, ಅವರ ಭಾವಚಿತ್ರ ಅರಿಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಮಾಡಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು, ಜೊತೆಗೆ ಕೇಂದ್ರ ಸರ್ಕಾರ ಅಮಿತ್ ಶಾ ಅವರನ್ನು ದೇಶದಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.

ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಯನ್ನು ಗೃಹ ಸಚಿವರನ್ನಾಗಿ ಮಾಡಿರುವುದೇ ಖಂಡನೀಯ. ಈ ಹಿಂದೆ ಗುಜರಾತ್‌ನಿಂದ ಗಡಿಪಾರು ಆಗಿದ್ದ ರೀತಿ ಇದೀಗ ದೇಶದಿಂದಲೇ ಅಮಿತ್‌ ಶಾ ಅವರನ್ನು ಬಂಧಿಸಿ ಗಡಿಪಾರು ಮಾಡಬೇಕು ಎಂದು ಪ್ರತಿಭಟನ ವಿದ್ಯಾರ್ಥಿಗಳು ಆಗ್ರಹಿಸಿದರು.

ಅಂಬೇಡ್ಕರ್ ಎಂಬುದು ಬರೀ ಹೆಸರಲ್ಲ ನಮ್ಮೆಲ್ಲರ ಉಸಿರು. ಪದೇ ಪದೇ ಸಂವಿಧಾನ ಹಾಗೂ ಅಂಬೇಡ್ಕರ್‌ ಅವರಿಗೆ ಅಪಮಾನ ಮಾಡುತ್ತಿರುವವರ ವಿರುದ್ಧ ದೇಶಾದದ್ಯಾಂತ ನಾಗರೀಕರು ಎಚ್ಚೆತ್ತುಕೊಳ್ಳಬೇಕಿದೆ. ಬಿಜೆಪಿ ಮನುವಾದಿ ಪಕ್ಷ, ಆ ಪಕ್ಷದ ನಿಜವಾದ ಬಣ್ಣ ಇದೀಗ ಮತ್ತೊಮ್ಮೆ ಬಯಲಾಗಿದೆ. ಮುಂಬರುವ ಚುನಾವಣೆ ವೇಳೆ ಅಂಬೇಡ್ಕರ್‌ ಪರ ನಿಲುವ ಇರುವ ಎಲ್ಲರೂ ಬಿಜೆಪಿಯಿಂದ ಹೊರಬರಬೇಕು. ಚುನಾವಣೆಯಲ್ಲಿ ಪಕ್ಷಕ್ಕೆ ತಕ್ಕೆ ಪಾಠ ಕಲಿಸಬೇಕು ಎಂದು ಪ್ರತಿಭಟನೆ ವೇಳೆ ಹಲವು ವಿದ್ಯಾರ್ಥಿಗಳು ಒತ್ತಾಯಿಸಿದರು.

ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ನಟರಾಜ್ ಶಿವಣ್ಣ, ಸಂಶೋಧಕರ ಸಂಘದ ಅಧ್ಯಕ್ಷ ಶಿವಶಂಕರ್, ಕಾರ್ಯಧ್ಯಕ್ಷ ಕಲ್ಲಹಳ್ಳಿ ಕುವಾರ್, ಕಾರ್ಯದರ್ಶಿ ವಿಶ್ವ ಪ್ರಸಾದ್, ಜಂಟಿ ಉಪಾಧ್ಯಕ್ಷರಾದ ಕೆ.ಮಲ್ಲೇಶ್, ಕೊ.ಲಿಂಗರಾಜು, ಪ್ರಧಾನ ಕಾರ್ಯದರ್ಶಿ ಕುಶಾಲ್, ವರಹಳ್ಳಿ ಆನಂದ, ಗಣೇಶ್, ಪಿ.ಮರಹಳ್ಳಿ ಮಹೇಶ್, ಲಿಂಪನ್ ರಾಜು, ದಲಿತ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಪುನೀತ್ ಆಲನಹಳ್ಳಿ, ಕಿರಣ್, ನಂದೀಶ್, ಸಚಿನ್, ಹಾಜರಿದ್ದರು.

Tags: