Mysore
27
clear sky

Social Media

ಗುರುವಾರ, 29 ಜನವರಿ 2026
Light
Dark

ಸಹಕಾರಿ ಕ್ಷೇತ್ರದಲ್ಲಿ ದಲಿತ ಮೀಸಲಾತಿ ಹೇಳಿಕೆ : ಶಾಸಕ ಜಿ.ಟಿ ದೇವೇಗೌಡ ಸ್ಪಷ್ಟನೆ ಏನು?

gt deve gowda

ಮೈಸೂರು : ನನ್ನ 50 ವರ್ಷಗಳಿಗೂ ಹೆಚ್ಚು ಅವಧಿಯ ರಾಜಕೀಯ ಜೀವನ ಹಾಗೂ ಸಹಕಾರಿ ಜೀವನದಲ್ಲಿ ದಲಿತರ, ಹಿಂದುಳಿದ ವರ್ಗಗಳ ಸಮುದಾಯದ ಏಳಿಗೆಗೆ ಶ್ರಮಿಸುತ್ತಿದ್ದೇನೆ ಹೊರತು ಎಂದಿಗೂ ವಿರೋಧಿಯಾಗಿಲ್ಲ’ ಸಹಕಾರಿ ಕ್ಷೇತ್ರದಲ್ಲಿ ಮೀಸಲಾತಿ ನೀಡಲು ವಿರೋಧ ಮಾಡಿಲ್ಲ ಎಂದು ಶಾಸಕ ಜಿ.ಟಿ.ದೇವೇಗೌಡ ಸ್ಪಷ್ಟನೆ ನೀಡಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಕಲಾಪದಲ್ಲಿ ಸಹಕಾರ ಸಂಘಗಳ ಕಾಯ್ದೆಯ ತಿದ್ದುಪಡಿ ವಿಚಾರವಾಗಿ ಮಾತನಾಡುವಾಗ ಸರ್ಕಾರ ಸಹಕಾರ ಸಂಘಗಳಿಗೆ ನಾಮನಿರ್ದೇಶನ ಮಾಡುವಾಗ ಮೂವರ ಬದಲಾಗಿ ನಾಲ್ಕು ಜನರನ್ನು ಮಾಡಿ ಎಂದು ಹೇಳಿದ್ದೇನೆ. ಇದರಲ್ಲಿ ಹಿಂದುಳಿದ ವರ್ಗಗಳಿಗೂ ಒಂದು ಅವಕಾಶ ಮಾಡಿಕೊಡುವಂತೆ ಹೇಳಿದ್ದೇನೆ ಎಂದು ತಿಳಿಸಿದರು.

ರಾಜ್ಯದಲ್ಲಿ ವಿವಿಧ ಸಹಕಾರ ಸಂಘಗಳು ಸೇರಿದಂತೆ ಸುಮಾರು ೪೭ ಸಾವಿರ ಸಂಘಗಳು ಇವೆ. ಇವುಗಳಲ್ಲಿ ೧೫ ಸಾವಿರ ಸಂಘಗಳು ಮುಚ್ಚುವ ಸ್ಥಿತಿಯಲ್ಲಿವೆ. ಸರ್ಕಾರದ ಹಸ್ತಕ್ಷೇಪ ಇದೇ ರೀತಿ ಮುಂದುವರಿದರೆ ಸಹಕಾರ ಸಂಘಗಳನ್ನು ಮುಚ್ಚಬೇಕಾಗುತ್ತದೆ ಎಂದು ಹೇಳಿದ್ದೇನೆ. ಆ ಸಮಯದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ ಹಾಗೂ ಸ್ಪೀಕರ್ ಅವರು ಮಧ್ಯ ಪ್ರವೇಶಿಸಿದಾಗ ನನ್ನ ಮಾತುಗಳು ರಾಜ್ಯದ ಜನತೆಗೆ ತಲುಪಿಲ್ಲ. ಈ ಗೊಂದಲದಿಂದ ನಾನು ಏನು ಮಾತನಾಡಿದ್ದೇನೆ ಎನ್ನುವುದನ್ನು ತಿಳಿಯದೇ ಕೆಲವರು ಪ್ರತಿಭಟನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಯಾವ-ಯಾವ ಮಾತುಗಳನ್ನು ಆಡಿದ್ದಾರೆ. ಟೀಕೆ ಮಾಡಿದರೂ ಅವರೇ ನನ್ನ ದೇವರುಗಳು. ನಾನು ಯಾರ ವಿರೋಧಿಯೂ ಅಲ್ಲ. ತಪ್ಪು ಮಾಡಿಯೂ ಇಲ್ಲ. ಆದರೂ ಕ್ಷಮೆ ಕೇಳುತ್ತೇನೆ ಎಂದರು.

ದಲಿತರ ವಿರುದ್ಧ ಮಾತನಾಡಿಲ್ಲ
ನಾನು ಹಾಗೂ ನಮ್ಮ ಕುಟುಂಬ ದಲಿತರ ವಿರೋಧವನ್ನು ಯಾವಾಗಲೂ ಮಾಡಿಲ್ಲ. ನಮ್ಮೂರಿನ ಪಕ್ಕದಲ್ಲಿ ಇರುವ ಗ್ರಾಮದಲ್ಲಿ ನಮ್ಮ ತಂದೆಯವರು ಮನೆ ಕಟ್ಟಿಸಿಕೊಟ್ಟಿದ್ದಾರೆ. ಅವರು ತಿರುಗಾಡುವ ಸಲುವಾಗಿ ನಮ್ಮ ಜಮೀನನ್ನು ರಸ್ತೆಗೆ ಬಿಟ್ಟುಕೊಟ್ಟಿದ್ದೇವೆ. ಕುಡಿಯುವ ನೀರಿಗೆ ಬಾವಿಯನ್ನು ಕೊಟ್ಟಿದ್ದೇವೆ. ನನ್ನ ಜೊತೆ ಯಾವಾಗಲೂ ದಲಿತರೇ ಇರುತ್ತಾರೆ. ಅವರೊಟ್ಟಿಗೆ ಸೇರಿಕೊಂಡು ಬೇಸಾಯವನ್ನು ಮಾಡಿದ್ದೇನೆ. ಹಲವರನ್ನು ಸಂಘ-ಸಂಸ್ಥೆಗಳಿಗೆ, ಸೊಸೈಟಿಗಳಿಗೆ ನಿರ್ದೇಶಕರು, ಅಧ್ಯಕ್ಷರನ್ನಾಗಿ ಮಾಡಿದ್ದೇನೆ. ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಸ್ಪರ್ಧಿಸಲು ಸಹಕಾರ ಕೊಟ್ಟಿದ್ದೇನೆ. ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯಲ್ಲಿ ಅನೇಕ ಕಲ್ಯಾಣ ಮಂಟಪಗಳು, ಪೆಟ್ರೋಲ್ ಬಂಕ್‌ಗಳು ಇತರೆ ಉದ್ಯಮಗಳು ಹಿಂದುಳಿದ ಹಾಗೂ ದಲಿತ ಸಮುದಾಯದವರಿಗೆ ಹೆಚ್ಚಿನ ಮಟ್ಟದಲ್ಲಿ ಇವೆ. ಎಲ್ಲರೂ ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ಇದು ಖುಷಿಯ ವಿಚಾರ ಎಂದರು.

ನ್ಯಾ.ನಾಗಮೋಹನ ದಾಸ್ ಅವರು ತಮ್ಮ ‘ಸಂವಿಧಾನ ಓದು’ ಪುಸ್ತಕವನ್ನು ವಿಧಾನಸೌಧದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ನನ್ನಿಂದ ಲೋಕಾರ್ಪಣೆಗೊಳಿಸಿದ್ದರು. ಅದು ನನಗೆ ಬಹಳ ಹೆಮ್ಮೆಯ ವಿಷಯವಾಗಿದೆ. ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ದಲಿತರ ಮನೆಯಲ್ಲಿ ವಾಸ್ತವ್ಯ ಮಾಡುವಂತೆ ಅವರಿಗೆ ತಿಳಿಸಿ, ಒಂದು ಮನೆಯಲ್ಲಿ ವಾಸ್ತವ್ಯವನ್ನೂ ಕೂಡ ಮಾಡಿಸಿದ್ದೇನೆ. ಅಂಥದ್ದರಲ್ಲಿ ನಾನು ದಲಿತರ ವಿರುದ್ಧವಾಗಿ ಮಾತನಾಡಲು ಸಾಧ್ಯವೇ? ಎಂದು ಅವರು ಪ್ರಶ್ನಿಸಿದರು.

Tags:
error: Content is protected !!