Mysore
22
overcast clouds
Light
Dark

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಸಾಧಕ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿಗಳಿಂದ ಸನ್ಮಾನ

ಮೈಸೂರು: ಇಂದು(ಮೇ.18) ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಲಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಟಾಪ್ 10 ಸ್ಥಾನ ಪಡೆದು ಉತ್ತಮ ಸಾಧನೆಗೈದ ಮಕ್ಕಳನ್ನು ಜಿಲ್ಲಾಧಿಕಾರಿ ಡಾ ಕೆ.ವಿ ರಾಜೇಂದ್ರ ಸನ್ಮಾನಿಸಿದರು.

ಬಳಿಕ ಮಾತನಾಡಿ, ಎಸ್.ಎಸ್.ಎಲ್.ಸಿ ಎಂಬುದು ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿದ್ದು, ಈ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ತೆಗೆದು ಸಾಧನೆ ಮಾಡಿದ್ದಾರೆ. ಈ ಯಶಸ್ಸು ನಿಮ್ಮ ಮುಂದಿನ ಗುರಿ ತಲುಪಲು ಸೇತುವೆಯಾಗಿ ಇನ್ನಷ್ಟು ಸಾಧನೆಯ ಗರಿ ನಿಮ್ಮ ಮೂಡಿಗೇರಲಿ ಎಂದು ವಿದ್ಯಾರ್ಥಿಗಳಿಗೆ ಹಾರೈಸಿದರು.

ಈ ಫಲಿತಾಂಶದಿಂದ ಮುಂದಿನ ದಿನಗಳಲ್ಲಿ ನಿಮ್ಮ ಮೇಲಿನ ನಿರೀಕ್ಷೆ ಹೆಚ್ಚಾಗಲಿದ್ದು, ಆ ಒತ್ತಡವನ್ನು ಧನಾತ್ಮಕವಾಗಿ ತೆಗೆದುಕೊಂಡು ಮುನ್ನಡೆಯಬೇಕು. ಹಂತ ಹಂತವಾಗಿ ನೋಡಿದಾಗ ಸ್ಪರ್ಧೆ ಹೆಚ್ಚಾಗಿದ್ದು, ಅದರಲ್ಲಿ ನಾವು ಏನು ಅಲ್ಲ ಎಂದೆಂನಿಸುತ್ತದೆ. ಹಾಗಾಗಿ ಮನಸ್ಸನ್ನು ಎಲ್ಲಿಯೂ ಕುಗ್ಗದಂತೆ ನೋಡಿಕೊಂಡು ಗುರಿಯತ್ತ ಸಾಗಬೇಕು. ನಿಮ್ಮ ಗುರಿ ಏನೆಂಬುದನ್ನು ಇಲ್ಲಿಯೇ ಅರಿತು ಅದರೊಂದಿಗೆ ಸಾಗಬೇಕಿದೆ ಎಂದರು.

ರ್ಯಾಂಕ್ ಬಂದ ಕೂಡಲೇ ಮುಂದಿನ ಭವಿಷ್ಯಕ್ಕೆ ಶ್ರಮ ಹಾಕುವುದನ್ನು ನಿಲ್ಲಿಸಬಾರದು. ಬದಲಾಗಿ ದಿನದಿಂದ ದಿನಕ್ಕೆ ಶ್ರಮ ದುಪ್ಪಟ್ಟಾಗಬೇಕು. ಸತತ ಪ್ರಯತ್ನದಿಂದ ಫಲಿತಾಂಶ ದೊರಕುವಂತೆ, ನಿಮ್ಮ ಸಾಧನೆ ಪೋಷಕರಿಗೆ ಹೆಮ್ಮೆ ತರಬೇಕು ಎಂದು ಕಿವಿ ಮಾತು ಹೇಳಿದರು.

ಕೇವಲ ಓದಿಗಷ್ಟೇ ಸೀಮಿತವಾಗದೆ ಕ್ರೀಡೆ ಇನ್ನಿತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಹಾಗಾಗಿ ಪ್ರತಿಯೊಬ್ಬರೂ ಓದಿನ ಜೊತೆಗೆ ಒಂದಲ್ಲ ಒಂದು ರೀತಿಯ ಇನ್ನಿತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಉತ್ತಮ ಎಂದು ತಿಳಿಸಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಮಾದರಿಯನ್ನಾಗಿಸಿಕೊಂಡು ದೊಡ್ಡ ಮಟ್ಟದ ಯಶಸ್ಸನ್ನು ಸಾಧಿಸುವತ್ತಾ ನಿಮ್ಮ ಗುರಿ ಇರಲಿ. ವಿದ್ಯಾರ್ಥಿಗಳ ಜೀವನ ಎಂಬ ವಿಷಯಕ್ಕೆ ಬಂದರೆ ಪೋಷಕರ ಪಾತ್ರ ಬಹಳ ಮುಖ್ಯವಾಗಿದ್ದು ಅವರ ಹಾಗೂ-ಹೋಗುಗಳನ್ನು ಸದಾ ಗಮನಿಸುತ್ತಿರಬೇಕು. ಮಾರ್ಗ ಸೂಚಿಸಬೇಕು ಎಂದರು.

ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ ಗಾಯತ್ರಿ ಮಾತನಾಡಿ, ಪ್ರಮುಖ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾದಾಗ ನಮ್ಮ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಅವುಗಳನ್ನು ಮನಗಂಡು ಯಶಸ್ವಿಯಾಗಿ ನಿರ್ವಹಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಡಿಡಿಪಿಐ ಪಾಂಡು ಸೇರಿದಂತೆ ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ 10 ಸ್ಥಾನ ಪಡೆದ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಉಪಸ್ಥಿತರಿದ್ದರು.