ಮೈಸೂರು : ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಆನ್‌ಲೈನ್ ವಂಚನೆಗೆ ಒಳಗಾಗಿರುವ ಮೂವರು ಸುಮಾರು ೪೮ ಲಕ್ಷ ರೂ.ಗಳನ್ನು ವಂಚಕರ ಖಾತೆಗೆ ಜಮೆ ಮಾಡಿ ಕಳೆದುಕೊಂಡಿದ್ದಾರೆ.
ಮೊದಲನೇ ಪ್ರಕರಣದಲ್ಲಿ ವಿವೇಕಾನಂದನಗರ ನಿವಾಸಿ,ಯೋಗ ಶಿಕ್ಷಕಿಯೊಬ್ಬರು ವಂಚಕನ ಮಾತಿಗೆ ಮರುಳಾಗಿ ೧೦.೦೯ ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ. ಜರ್ಮನ್ ದೇಶದ ಪ್ರಜೆ ಎಂದು ಪರಿಚಯಿಸಿಕೊಂಡ ಅಪರಿಚಿತ ತಾನು ಯೋಗ ಶಾಲೆಗೆ ದಾಖಲಾಗುವುದಾಗಿ ಹೇಳಿಕೊಂಡಿದ್ದಾನೆ. ನಂತರ ನೀವು ಯೋಗ ಶಿಕ್ಷಣವನ್ನು ಉತ್ತಮವಾಗಿ ಹೇಳಿಕೊಡುತ್ತೀರಿ. ಹೀಗಾಗಿ ನಿಮಗೆ ೫೦ ಲಕ್ಷ ರೂ. ಬೆಲೆಬಾಳುವ ಉಡುಗೊರೆ ನೀಡುತ್ತಿರುವುದಾಗಿ ತಿಳಿಸಿದ್ದಾನೆ. ನಂತರ ಇಲ್ಲಿ ಕಸ್ಟಮ್ಸ್ ಹಣ ಪಾವತಿಸಬೇಕು. ಹೀಗಾಗಿ ೧೦.೦೯ ಲಕ್ಷ ರೂ.ಗಳನ್ನು ಖಾತೆಗೆ ಹಾಕುವಂತೆ ತಿಳಿಸಿದ್ದಾನೆ. ನಂತರ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಹೀಗಾಗಿ ಅವರಿಗೆ ತಾನು ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ.
ಎರಡನೇ ಪ್ರಕರಣದಲ್ಲಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದಲ್ಲಿ ಹೆಚ್ಚಿನ ಲಾಭ ಗಳಿಸಬಹುದು ಎಂಬ ವಂಚಕರ ಮಾತನ್ನು ನಂಬಿದ ಗೋಕುಲಂನ ವ್ಯಕ್ತಿಯೊಬ್ಬರು ೨೯.೦೪ ಲಕ್ಷ ರೂ. ಕಳೆದುಕೊಂಡಿದ್ದಾರೆ.
ಇನ್ಸ್ಟಾ ಗ್ರಾಂ ಮೂಲಕ ಅವರು ಷೇರು ಮಾರುಕಟ್ಟೆಯ ಬಗ್ಗೆ ತಿಳಿದುಕೊಂಡಿದ್ದಾರೆ. ನಂತರ ಅಲ್ಲಿನ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದಾರೆ. ವಂಚಕರು ಹೇಳಿದಂತೆ ಅವರ ಖಾತೆಗೆ ಹಣ ಜಮೆ ಮಾಡಿದ್ದಾರೆ. ನಂತರ ಅವರಿಗೆ ಯಾವ ಲಾಭವೂ ಬಂದಿಲ್ಲ. ನಂತರ ಅವರಿಗೆ ತಾವು ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದಿದೆ.
ಇದನ್ನೂ ಓದಿ:-ಶ್ವಾನ ಪ್ರದರ್ಶನ : ಜರ್ಮನ್ ಶಫರ್ಡ್‌ಗೆ ಮೊದಲ ಸ್ಥಾನ
ಮೂರನೇ ಪ್ರಕರಣದಲ್ಲಿ ಆನ್‌ಲೈನ್ ಮೂಲಕ ಉದ್ಯೋಗ ಗಿಟ್ಟಿಸಿದ್ದ ಮಹಿಳೆಯೊಬ್ಬರು ನಂತರ ನಕಲಿ ಕಂಪೆನಿ ಸಿಬ್ಬಂದಿಯ ಮಾತನ್ನು ನಂಬಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವ ಮೂಲಕ ೮ ಲಕ್ಷ ರೂ. ಕಳೆದುಕೊಂಡಿದ್ದಾರೆ.
ಚಲನಚಿತ್ರಗಳನ್ನು ಪ್ರಮೋಟ್ ಮಾಡುವ ಕೆಲಸಕ್ಕೆ ಸೇರಿದ ಮಹಿಳೆ ಮೊದಲು ೬ ಸಾವಿರ ರೂ. ಗಳನ್ನು ನಕಲಿ ಕಂಪೆನಿ ಮೂಲಕ ಪಡೆದಿದ್ದಾರೆ. ನಂತರ ಷೇರು ಮಾರುಕಟ್ಟೆ ಬಗ್ಗೆ ಅವರಿಂದ ಉತ್ತೇಜಿತರಾದ ಆಕೆ ೮ ಲಕ್ಷ ರೂ.ಗಳನ್ನು ಹೂಡಿಕೆ ಮಾಡಿ ಕಳೆದುಕೊಂಡಿದ್ದಾರೆ. ಈ ಸಂಬಂಧ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





