Mysore
21
overcast clouds

Social Media

ಭಾನುವಾರ, 13 ಜುಲೈ 2025
Light
Dark

ಖ್ಯಾತ ಶಹನಾಯಿ ವಾದಕ ಪಂ.ಬಸವರಾಜ ಭಜಂತ್ರಿ ಅವರ ಸಾಧನೆ ಸ್ತುತ್ಯಾರ್ಹ: ಸಿಎಂ ಸಿದ್ದರಾಮಯ್ಯ

ಮೈಸೂರು ದಸರಾ ವರ್ಣ ರಂಚಿತ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಿಎಂ ಚಾಲನೆ

ಮೈಸೂರು : ಹಾವೇರಿ ಜಿಲ್ಲೆಯ ಖ್ಯಾತ ಶಹನಾಯಿ ವಾದಕ ಪಂ.ಬಸವರಾಜ ಭಜಂತ್ರಿ ಅವರಿಗೆ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದ್ದು, ಸಂಗೀತ ಕ್ಷೇತ್ರದಲ್ಲಿ ಅವರು ಮಾಡಿರುವ ಅಪಾರ ಸಾಧನೆ ಸ್ತುತ್ಯಾರ್ಹ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರಧಾನ ಸಮಾರಂಭ ದಲ್ಲಿ ಭಾಗವಹಿಸಿ ಪ್ರಶಸ್ತಿ ಪ್ರಧಾನ ಮಾಡಿ ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಇಂದು ಹಂ.ಪಾ .ನಾಗರಾಜಯ್ಯ ನವರಿಂದ ದಸರಾ ಉತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆತಿದೆ. ಇಂದು ದಸರಾ ಉತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಲಾಗಿದೆ ಎಂದರು.

ಮೈಸೂರು ಸಾಂಸ್ಕೃತಿಕ ನಗರ
ಮೈಸೂರನ್ನು ಸಾಂಸ್ಕೃತಿಕ ನಗರ ಎಂದು ಗುರುತಿಸಲಾಗುತ್ತದೆ. ರಾಜರ ಕಾಲದಿಂದಲೂ ಕೂಡ ಸಂಗೀತ, ನಾಟ್ಯ, ವಿವಿಧ ಕಲೆಗಳಿಗೆ ಪ್ರೋತ್ಸಾಹಿಸಲಾಗುತ್ತಿತ್ತು. ಈ ಪರಂಪರೆಯನ್ನು ಸರ್ಕಾರವೂ ಮುಂದುವರೆಸಿಕೊಂಡು ಬಂದಿದೆ. ಸಂಗೀತ ಸಾಹಿತ್ಯ ಕಲೆಯ ಕ್ಷೇತ್ರದಲ್ಲಿ ಅಪಾರ ಸಾಧನೆಯನ್ನು ಮಾಡಿರುವ ಅಪ್ರತಿಮ ಸಾಧಕರನ್ನು ಗುರುತಿಸಿ ಗೌರವಿಸುವುದು ಸರ್ಕಾರದ ಕರ್ತವ್ಯ. ಈ ಬಾರಿ ಸರ್ಕಾರ ದಸರಾ ಉತ್ಸವವನ್ನು ವೈಭವಯುತವಾಗಿ ಆಯೋಜಿಸಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.

ದಸರಾ ಸವಿಯಲು ನಮಗೂ ಆಸೆ: ಡಿಸಿಎಂ ಡಿಕೆ ಶಿವಕುಮಾರ್
ನಮ್ಮ ರಾಜಕೀಯದ ಕೆಲಸಗಳನ್ನೆಲ್ಲ ಹೊರತು ಪಡಿಸಿ ದಸರಾ ಕಾರ್ಯಕ್ರಮವನ್ನು ಸವಿಯಬೇಕು ಎಂದು ನಮಗೂ ಆಸೆ. ಮೈಸೂರು ಜನರಿಗೆ ಇರುವಷ್ಟು ಭಾಗ್ಯ ಅದೃಷ್ಟ ಬೇರೆ ಯಾವ ಜನತೆಗೂ ಕೂಡ ಇಲ್ಲ. ದಸರಾದ ದಿನಗಳಂದು ಮೈಸೂರಿನ ಜನರು ವಿವಿಧ ಕಾರ್ಯಕ್ರಮಗಳನ್ನು ಸವಿಯುತ್ತಾ ಕಲೆಯನ್ನು ಆರಾಧನೆ ಮಾಡುತ್ತಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.

ಕಲೆಯ ಆರಾಧನೆಯೇ ನಮ್ಮ ಮೈಸೂರು ದಸರಾ ಎಂದರು ತಪ್ಪಾಗದು. ನಾಡಿನ ಸಂಸ್ಕೃತಿಯನ್ನು ಸಾರುವುದೇ ಈ ನಮ್ಮ ನಾಡಹಬ್ಬ ದಸರಾವಾಗಿದೆ. ಪ್ರತಿಯೊಂದು ವಸ್ತುವಿನಿಂದ ಒಂದೊಂದು ರೀತಿಯ ಕಲಾ ಕೃತಿಯನ್ನು ಸೃಷ್ಟಿಸಬಹುದು. ಚಾಮರಾಜನಗರ ಕಾಡಿನಿಂದ ತಂದಂತ ಒಂದು ಬಿದಿರು ಕೊಳಲಿನ ಆಕೃತಿಯನ್ನು ಪಡೆದು ಕೃಷ್ಣನ ಜೊತೆ ಸೇರಿತ್ತು ಹಾಗೆ ಪ್ರತಿಯೊಂದು ವಸ್ತುವಿನಲ್ಲಿ ಕೂಡ ವಿಶೇಷತೆ ಇದೆ ಎಂದರು.

ಪ್ರತಿಯೊಬ್ಬರೂ ಕೂಡ ದಸರಾ ಆಚರಣೆಯಲ್ಲಿ ಪಾಲ್ಗೊಂಡು ಅತ್ಯಂತ ಯಶಸ್ವಿಯಾಗಿ ದಸರಾದ ಪ್ರತಿಯೊಂದು ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.

ಸಾಮಾನ್ಯ ವ್ಯಕ್ತಿಯನ್ನು ಗುರುತಿಸಿ ಪ್ರಶಸ್ತಿ ನೀಡುರುವುದು ಸಂತೋಷದ ವಿಷಯ
ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದ ಸಾಮಾನ್ಯ ವ್ಯಕ್ತಿಗಳನ್ನು ಅವರ ಸಾಧನೆಗಳನ್ನು ಗುರುತಿಸಿ ಸರ್ಕಾರವು ಗೌರವ ಸೂಚಿಸುತ್ತಿರುವುದು ಪ್ರತಿಯೊಬ್ಬ ಕಲಾವಿದರು ಸಂತೋಷದ ವಿಷಯ ಎಂದು ಖ್ಯಾತ ಶಹನಾಯಿ ಕಲಾವಿದರು ಮತ್ತು ಸಂಗೀತ ವಿದ್ವಾನ್ ಪ್ರಶಸ್ತಿ ಪುರಸ್ಕೃತರಾದ ಪಂಡಿತ್ ಬಸವರಾಜು ಭಜಂತ್ರಿ ಹೇಳಿದರು.

ನಮ್ಮ ಸಾಧನೆಯನ್ನು ಗುರುತಿಸಿ ಕರ್ನಾಟಕ ಸರ್ಕಾರದ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಇನ್ನಿತರರಿಗೆ ಧನ್ಯವಾದಗಳು, ಈ ಹಿಂದೆ ವಿವಿಧ ಕಲಾವಿದರುಗಳು ಪ್ರಶಸ್ತಿಗಳಿಗೆ ಅರ್ಜಿಯನ್ನು ನೀಡಿದರು ಆದರೆ ನಾನು ಯಾವುದೇ ಅರ್ಜಿಯನ್ನು ನೀಡಿರಲಿಲ್ಲ ಸಿದ್ದರಾಮಯ್ಯನವರು ನನ್ನ ಕಲೆಯನ್ನು ಗುರುತಿಸಿ ಈ ದಿನ ಪ್ರಶಸ್ತಿ ಪ್ರಧಾನವನ್ನು ಮಾಡಿರುವುದು ನನಗೆ ತುಂಬಾ ಸಂತೋಷವನ್ನು ತಂದುಕೊಟ್ಟಿದೆ ಎಂದು ತಿಳಿಸಿದರು.

ಅರ್ಥಪೂರ್ಣ ಮೈಸೂರು ದಸರಾ
ಸಿಎಂ ಸಿದ್ದರಾಮಯ್ಯನ ನೇತೃತ್ವದ ಸರ್ಕಾರ ನಾಲ್ವಡಿ ಕೃಷ್ಣರಾಜ ಒಡೆಯರ ಆಡಳಿತದ ಪ್ರತಿಯೊಂದು ಮೌಲ್ಯ ನಿರ್ಧಾರ ಪ್ರಜಾಸತ್ತಾತ್ಮಕ ನಡವಳಿಕೆ, ಜನಪರವಾದ ಕಾರ್ಯಕ್ರಮಗಳನ್ನು ಆಡಳಿತಾತ್ಮಕವಾಗಿ ಅನುಷ್ಠಾನಗೊಳಿಸುವ ಮುಖಾಂತರ ಮೈಸೂರು ದಸರಾವನ್ನು ಅರ್ಥಪೂರ್ಣವಾಗಿ ರಾಜ್ಯಕ್ಕೆ ದೇಶಕ್ಕೆ ವಿಸ್ತರಿಸುವಂತೆ ಮಾಡಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್ ಸಿ ಮಹದೇವಪ್ಪ ಹೇಳಿದರು.

ಮೈಸೂರಿಗೂ ಮತ್ತು ಮೈಸೂರು ದಸರಾ ಸೇರಿ ನಮ್ಮ ದೇಶದ ಜನಸಾಮಾನ್ಯರ ಸೌಹಾರ್ದತೆ ಶಾಂತಿ ಸಹ ಬಾಳ್ವೆ ಮತ್ತು ಸಮಾನತೆಯ ಮನೋಭಾವವನ್ನು ಕೊಡುವಂತಹ ಆಡಳಿತ ಜಾರಿ ಮಾಡುವುದರ ಜೊತೆಗೆ ಜನಸಾಮಾನ್ಯರಿಗೆ ಸಾಂಸ್ಕೃತಿಕ ಮೌಲ್ಯಗಳ ಪ್ರೋತ್ಸಾಹಿಸುತ್ತಾ ಕ್ರೀಡೆ ಕಲೆ ಸಾಹಿತ್ಯ ಸಂಗೀತ ನೃತ್ಯ ಮತ್ತು ಪ್ರತಿಯೊಂದು ವಸ್ತು ವಿಷಯಕ್ಕೂ ಮಾನ್ಯತೆ ನೀಡುತ್ತಾ ಎಲ್ಲಾ ಜನರನ್ನು ಒಟ್ಟುಗೂಡಿಸಿ ಜನರ ರಕ್ಷಣೆ ಮಾಡುತ್ತಾ ಸಮೃದ್ಧ ನಾಡನ್ನು ಕಟ್ಟುತ್ತೇವೆ.ನಮ್ಮ ಸರ್ಕಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಹೆಜ್ಜೆ ಇಡುತ್ತಾ ಜನರಿಗೆ ನೀಡಿದ ಆಶ್ವಾಸನೆಯನ್ನು ಒದಗಿಸುವ ಪ್ರಯತ್ನ ಮಾಡುತ್ತಿದ್ದೇವೆ. ಪ್ರಜಾಪ್ರಭುತ್ವ ಜನರ ಆಸ್ತಿ, ವಾಕ್ ಸ್ವಾತಂತ್ರ್ಯವನ್ನು ಕಳೆದುಕೊಳ್ಳದ ರೀತಿಯಲ್ಲಿ ಎಲ್ಲರೂ ಪ್ರಜಾಪ್ರಭುತ್ವ ರಕ್ಷಣೆ ಮಾಡುತ್ತಾ ಸಂವಿಧಾನದ ಆಸೆಯಂತೆ ಎಲ್ಲಾ ಜನರಿಗೂ ಸಮಾನವಾದ ಹಕ್ಕುಗಳನ್ನು ನೀಡಿ ನ್ಯಾಯಯುತವಾದ ಆಡಳಿತವನ್ನು ನಡೆಸುತ್ತೇವೆ, 136 ಜನರನ್ನು ಆಯ್ಕೆ ಮಾಡಿ ಸಂಪೂರ್ಣ ಆಡಳಿತವನ್ನು ನಡೆಸುವಂತೆ ಜನರು ನಮ್ಮನ್ನು ಆಯ್ಕೆ ಮಾಡಿದ್ದಾರೆ ಅವರಿಗೆ ನಾವು ಎಂದಿಗೂ ಆಭಾರಿಯಾಗಿರುತ್ತೇವೆ ಎಂದರು.

ಜನಸಾಮಾನ್ಯರ ಮೂಲಭೂತವಾದ ಬದುಕನ್ನು ಎತ್ತಿ ಹಿಡಿಯುವುದಕ್ಕೆ ಬೆಂಬಲ ಕೊಡಬೇಕು. ನಮ್ಮ ಸರ್ಕಾರ ಮತ್ತು ಪ್ರಜಾಪ್ರಭುತ್ವದ ನೆಲೆಯಾಗಿದೆ, ಮೈಸೂರಿಗರು ಸೌಹಾರ್ದತೆ ಪ್ರೀತಿ ಶಾಂತಿ ಒಗ್ಗೂಡಿ ಹೆಸರುವಾಸಿಯಾದವರು ಮೈಸೂರಿಗರ ವಿಶಾಲ ಹೃದಯವನ್ನು ಈ ನಾಡಿಗೆ ಮತ್ತೊಮ್ಮೆ ತೋರಿಸೋಣ ಹತ್ತು ದಿನಗಳ ದಸರಾ ಕಾರ್ಯಕ್ರಮವನ್ನು ಒಟ್ಟಾರೆಯಾಗಿ ಆಚರಿಸುತ್ತಾ ಈ ದಸರಾವನ್ನು ಜನರ ದಸರಾವನ್ನಾಗಿ ಮಾಡೋಣ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೃಷ್ಣರಾಜ ಕ್ಷೇತ್ರದ ಶಾಸಕರಾದ ಟಿ.ಎಸ್. ಶ್ರೀವತ್ಸರವರು ಮೈಸೂರು ದಸರಾಕ್ಕೆ ಅಪಾರವಾದ ಇತಿಹಾಸವಿದೆ ಇತಿಹಾಸದ ಕ್ಷಣಗಳನ್ನು ಪ್ರತಿ ಬಾರಿಯೂ ಮೇಲಕು ಹಾಕುವುದು ನಮ್ಮ ಕರ್ತವ್ಯವಾಗಿದೆ ಈ ಹಿಂದೆ ಮೈಸೂರು ಸಂಸ್ಥಾನದಲ್ಲಿ ದಸರಾ ಸಂದರ್ಭದಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕೆಂಬುದು ವಿವಿಧ ವಿದ್ವಾಂಸರ ಆಸೆಯಾಗಿತ್ತು. ಅದೇ ರೀತಿಯಲ್ಲಿ ನಮ್ಮ ಸರ್ಕಾರಗಳು ಪ್ರತಿ ಬಾರಿ ದಸರಾ ಸಂದರ್ಭದಲ್ಲಿ ಅರಮನೆ ವೇದಿಕೆಯಲ್ಲಿ ಉತ್ತಮವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರೂಪಿಸಿ ದಸರಾ ಹೀಗೆ ಮೆರಗು ತರುವಂತೆ ಮಾಡಿದೆ ಎಂದರು.

ಈ ಸಂದರ್ಭದಲ್ಲಿ ಶಹನಾಯಿ ಸಂಗೀತ ಕ್ಷೇತ್ರದಲ್ಲಿ ಮಹಾನ್ ಸಾಧನೆಗೈದ ಪಂಡಿತ್ ಬಸವರಾಜ ಭಜಂತ್ರಿ ಅವರಿಗೆ ಸಂಗೀತ ವಿದ್ವಾಂ ಪ್ರಶಸ್ತಿ ನೀಡಿರುವುದು ಅತ್ಯಂತ ಪ್ರಮುಖ ಅಂಶವಾಗಿದೆ. ಕಲಾವಿದರನ್ನು ಗುರುತಿಸಿ, ಅವರಿಗೆ ಗೌರವ ಸಮರ್ಪಣೆ ಮಾಡುವಲ್ಲಿ ಸಿದ್ದರಾಮಯ್ಯ ನವರ ನೇತೃತ್ವದ ಸರ್ಕಾರವು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಉದ್ಘಾಟನಾ ಕಾರ್ಯಕ್ರಮದ ನಂತರ ನಮಸ್ತೆ ಇಂಡಿಯಾ ನಾಟ್ಯ ರೂಪಕ ಕಾರ್ಯಕ್ರಮವನ್ನು ಹೆಸರಾಂತ ನಾಟ್ಯ ಲಕ್ಷ್ಮಣ್ ಅವರು ನಡೆಸಿಕೊಟ್ಟರು, ಹಾಗೂ ಖ್ಯಾತ ಗಾಯಕರಾದ ಅನುರಾಧ ಭಟ್, ಸುಚೇತ್ ರಂಗಸ್ವಾಮಿ ಮತ್ತು ತಂಡದವರು ನಡೆಸಿದ ಭಕ್ತಿ ಭಾವ ಗಣ ಸುಧಾ ಕಾರ್ಯಕ್ರಮವು ಅರಮನೆ ಆವರಣದಲ್ಲಿ ಪಾಲ್ಗೊಂಡಿದ್ದ ಜನರ ಮನ ಸೆಳೆಯಿತ್ತು, ಭಕ್ತಿ ಭಾವ ಗೀತೆಗಳಿಂದ ಅರಮನೆ ಆವರಣದಲ್ಲಿ ನೆರೆದಿದ್ದ ಪ್ರವಾಸಿಗರು ಸಂತಸ ಪಟ್ಟರು.

ಕಾರ್ಯಕ್ರಮಕ್ಕೂ ಮುನ್ನ ಮಹದೇವಪ್ಪ ಮತ್ತು ಮಲ್ಲೇಶಯ್ಯ ತಂಡದಿಂದ ನಂದಿ ಧ್ವಜ ಕುಣಿತ, ಸಿದ್ದಾರ್ಥ ಮತ್ತು ತಂಡದಿಂದ ವೀರಗಾಸೆ ಪ್ರದರ್ಶನ, ಗುರು ರಾಜ್ ಮತ್ತು ತಂಡದಿಂದ ಮಂಗಳವಾದ್ಯ, ಹಾಗೂ ಮೈಸೂರು ಸಂಸ್ಥಾನದ ಮಹಾನ್ ವ್ಯಕ್ತಿಯಾದ ನಾಲ್ವಡಿ ಕೃಷ್ಣರಾಜ ಅವರು ಮೈಸೂರು ಸಂಸ್ಥಾನದ ಅಭಿವೃದ್ಧಿಗೆ ಕೈಗೊಂಡ ಹಲವಾರು ಕಾರ್ಯಕ್ರಮಗಳ ಕುರಿತು ವಿವಿಧ ಭಾವಗೀತೆಗಳ ಮೂಲಕ ಅರಮನೆ ಅಂಗಳದಲ್ಲಿ ನೆರೆದಿದ್ದ ವಿವಿಧ ರಾಜ್ಯ ಹಾಗೂ ದೇಶದ ಜನತೆಗೆ ತಿಳಿಸಿ ಕೊಡುವ ಪ್ರಯತ್ನವನ್ನು ಸಿದ್ದರಾಜು ಮತ್ತು ಗೀತಾ ಗಾಯಕರ ತಂಡವು ಮಾಡಿತು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ಕರ್ನಾಟಕ ರಾಜ್ಯ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಡಾ.ಪುಷ್ಪ ಅಮರನಾಥ್, ಶಾಸಕರಾದ ಡಿ. ರವಿಶಂಕರ್, ಕೃಷ್ಣಮೂರ್ತಿ ಹಾಗೂ ವಿಧಾನಪರಿಷತ್ ಶಾಸಕರಾದ ಡಾ. ತಿಮ್ಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಧರಣಿ ದೇವಿ ಮಾಲಗತ್ತಿ, ಜಿಲ್ಲಾಧಿಕಾರಿಗಳಾದ ಜಿ ಲಕ್ಷ್ಮಿ ಕಾಂತ ರೆಡ್ಡಿ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಗಾಯಿತ್ರಿ ಕೆ ಎಂ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

 

Tags:
error: Content is protected !!