ಮೈಸೂರು: ನಿಗದಿತ ಬೆಲೆಗಿಂತ ೬೦ ರೂ. ಹೆಚ್ಚುವರಿ ದರಕ್ಕೆ ಅಡುಗೆ ಎಣ್ಣೆ ಮಾರಾಟ ಮಾಡಿದ ಎಸ್‌ಎಸ್‌ಜಿ ಸೂಪರ್ ಮಾರ್ಕೆಟ್ ವಿರುದ್ಧ ಗ್ರಾಹಕರ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿದೆ.
ನಂಜನಗೂಡು ತಾಲ್ಲೂಕಿನ ಸಿಂಧುವಳ್ಳಿಯ ಬಳಿ ಇರುವ ಎಸ್‌ಎಸ್‌ಜಿ ಸೂಪರ್ ಮಾರ್ಕೆಟ್‌ನಲ್ಲಿ ಸನ್ ಪ್ಯೂರ್ ಅಡುಗೆ ಎಣ್ಣೆಯನ್ನು ಮುಖಬೆಲೆಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದ್ದಾರೆ ಎಂದು ಗ್ರಾಮದ ಯುವಕ ಎಂ. ಸುರೇಶ್ ಎಂಬವರು ಗ್ರಾಹಕರ ರಕ್ಷಣಾ ಕಾಯ್ದೆಯಡಿ ದೂರು ದಾಖಲಿಸಿದ್ದಾರೆ.
ಅ. ೧೯ರಂದು ಸುರೇಶ್ ಅವರು ಎಸ್‌ಎಸ್‌ಜಿ ಸೂಪರ್ ಮಾರ್ಕೆಟ್‌ನಲ್ಲಿ ೪ ಲೀಟರ್ ಅಡುಗೆ ಎಣ್ಣೆ ಖರೀದಿಸಿದ್ದಾರೆ. ಅಂಗಡಿ ಮಾಲೀಕ ಪ್ರತಿ ಲೀಟರಿಗೆ ೧೪೫ ರೂ. ನಂತೆ ೪ ಲೀಟರ್‌ಗೆ ೫೮೦ ರೂ. ಗಳನ್ನು ಪಾವತಿಸುವಂತೆ ಹೇಳಿದ್ದಾರೆ. ಆದರೆ, ಒಂದು ಲೀಟರ್ ಅಡುಗೆ ಎಣ್ಣೆಗೆ ೧೩೦ ರೂ. ಮುಖಬೆಲೆ ಇದ್ದು, ಅದರಂತೆ ಮಾರಾಟ ಮಾಡದೆ ಹೆಚ್ಚಿನ ದರಕ್ಕೆ ಏಕೆ ಮಾರಾಟ ಮಾಡುತ್ತಿದ್ದೀರಿ ಎಂದು ಸುರೇಶ್ ಪ್ರಶ್ನಿಸಿದ್ದಾರೆ.
ಇಷ್ಟವಿದ್ದರೆ ತೆಗೆದುಕೊಳ್ಳಿ, ನಾನು ಮಾರಾಟ ಮಾಡುವುದು ಇದೇ ಬೆಲೆಗೆ, ಊರಿನವರೆಲ್ಲರೂ ಇಷ್ಟೇ ಬೆಲೆ ಕೊಟ್ಟು ತೆಗೆದುಕೊಳ್ಳುವುದು ಎಂದು ಗದರುವುದರ ಜೊತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಹೀಗಾಗಿ ಮಾನಸಿಕ ಹಾಗೂ ಆರ್ಥಿಕ ನಷ್ಟ ಅನುಭವಿಸಿದ ಸುರೇಶ್ ಗ್ರಾಹಕರಿಗೆ ಮೋಸ ಮಾಡಿದ ಆರೋಪದಡಿ ದೂರು ದಾಖಲಿಸಿದ್ದಾರೆ.