Mysore
18
clear sky

Social Media

ಶುಕ್ರವಾರ, 02 ಜನವರಿ 2026
Light
Dark

ಬಂಡೀಪುರ, ನಾಗರಹೊಳೆಯಲ್ಲಿ ಹಂತ ಹಂತವಾಗಿ ಸಫಾರಿ ಆರಂಭ : ಸಿಎಂ

ಬೆಂಗಳೂರು : ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಹಂತ ಹಂತವಾಗಿ ಸಫಾರಿ ಆರಂಭಿಸಲು ಮತ್ತು ಧಾರಣಾ ಶಕ್ತಿ ಮತ್ತು ಹುಲಿಗಳು ನಾಡಿನತ್ತ ಬರುವುದು ಏಕೆ ಎಂಬ ಬಗ್ಗೆ ಅಧ್ಯಯನ ಮಾಡಿ ವರದಿ ಸಲ್ಲಿಸಲು ತಜ್ಞರ ಸಮಿತಿಯನ್ನು ರಚಿಸಲು ಅರಣ್ಯ ಇಲಾಖೆ ಸಚಿವರು ಮತ್ತು ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಸೂಚಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಕರ್ನಾಟಕ ವನ್ಯಜೀವಿ ಮಂಡಳಿಯ ೨೦ನೇ ಸಭೆಯಲ್ಲಿ ಸಫಾರಿ ವಾಹನಗಳ ಕಿರಿಕಿರಿಯಿಂದ ವನ್ಯಜೀವಿಗಳು ಕಾಡಿನಿಂದ ನಾಡಿಗೆ ಬರುತ್ತಿವೆಯೇ, ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಸಫಾರಿ ವಾಹನಗಳ ಧಾರಣಾ ಸಾಮರ್ಥ್ಯವೆಷ್ಟು ಎಂಬ ಬಗ್ಗೆ ಅಧ್ಯಯನ ಮಾಡಲು ತಜ್ಞರ ಸಮಿತಿ ರಚಿಸಲು ನಿರ್ಣಯಿಸಲಾಗಿದೆ.

ಸಭೆಯಲ್ಲಿ ಅಧ್ಯಕ್ಷರ ಅನುಮತಿಯ ಮೇರೆಗೆ ಈ ವಿಷಯ ಪ್ರಸ್ತಾಪಿಸಿದ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರು, ಕಳೆದ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಹುಲಿಗಳ ದಾಳಿಯಿಂದ ಮೂವರು ಸಾವಿಗೀಡಾಗಿ, ಒಬ್ಬರು ಶಾಶ್ವತ ವಿಶೇಷಚೇತನರಾದ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೆ ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಸಫಾರಿ ಸ್ಥಗಿತಗೊಳಿಸಲಾಯಿತು. ಈ ೨ ತಿಂಗಳ ಅವಽಯಲ್ಲಿ ಕಾಡಿನ ಹೊರಗೆ ಹುಲಿ ದಾಳಿ ನಡೆದಿಲ್ಲ, ಯಾವುದೇ ಜೀವಹಾನಿ ಆಗಿಲ್ಲ ಎಂದು ಸಭೆಗೆ ವಿವರಿಸಿದರು.

ಸಫಾರಿ ವಾಹನಗಳ ಕಿರಿಕಿರಿಯಿಂದ, ವಾಹನಗಳ ಬೆಳಕಿನಿಂದ ವನ್ಯಜೀವಿಗಳು ಹೊರಬರುತ್ತವೆ ಎಂಬುದು ಸ್ಥಳೀಯರು ಮತ್ತು ರೈತರ ಆರೋಪವಾಗಿದೆ. ಈ ಬಗ್ಗೆ ಅಧ್ಯಯನ ನಡೆಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

೧೯೭೨ರಲ್ಲಿ ಬಂಡೀಪುರದಲ್ಲಿ ಕೇವಲ ೧೨ ಹುಲಿಗಳು ಇದ್ದವು. ಇಂದು ಸುಮಾರು ೧೭೫ – ೨೦೦ ಹುಲಿಗಳಿವೆ. ಒಂದು ಹುಲಿ ಸ್ವಚ್ಛಂದವಾಗಿ ಜೀವಿಸಲು ೧೦ ಚದರ ಕಿಲೋ ಮೀಟರ್ ಪ್ರದೇಶ ಬೇಕು ಎಂದು ತಜ್ಞರು ಹೇಳುತ್ತಾರೆ. ಆದರೆ ೯೦೦ ಚದರ ಕಿಲೋಮೀಟರ್ ಕಾಡಿನಲ್ಲಿ ೨ ಪಟ್ಟು ಹುಲಿಗಳಿವೆ. ಇದು ಸಹ ಹುಲಿಗಳು ಕಾಡಿನಿಂದ ನಾಡಿನತ್ತ ಬರಲು ಕಾರಣವಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.

ವನ ಮತ್ತು ವನ್ಯಜೀವಿ ವಿಭಾಗದ ರಾಯಭಾರಿ ಅನಿಲ್ ಕುಂಬ್ಳೆ ವನ್ಯಜೀವಿಗಳು ಕಾಡಿನಿಂದ ಹೊರಗೆ ಬರುವುದಕ್ಕೂ ಸಫಾರಿಗೂ ಸಂಬಂಧವಿಲ್ಲ. ಸಫಾರಿಗೆ ಕೇವಲ ಶೇ.೮ರಷ್ಟು ಅರಣ್ಯ ಪ್ರದೇಶವೂ ಬಳಕೆ ಆಗುವುದಿಲ್ಲ, ಸ್ಥಳೀಯರ ಜೀವನೋಪಾಯವೂ ಇದರಲ್ಲಿ ಅಡಗಿದೆ. ಹೀಗಾಗಿ ಪುನರ್ ಪರಿಶೀಲಿಸಬೇಕು ಎಂದು ಸಲಹೆ ಮಾಡಿದರು.

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕ ಪಿ.ಸಿ.ರೇ, ಹಂತಹಂತವಾಗಿ ಸಫಾರಿ ಆರಂಭಿಸುವುದು ಸೂಕ್ತ ಎಂದು ತಿಳಿಸಿದರು. ಸಭೆಯಲ್ಲಿ ಇದೇ ಅಭಿಪ್ರಾಯ ವ್ಯಕ್ತವಾಯಿತು.

Tags:
error: Content is protected !!