ಮೈಸೂರು : ರಾಜ್ಯದಲ್ಲಿ ಕೈಗಾರಿಕೆಗಳ ಬೆಳವಣಿಗೆ, ಉತ್ತೇಜನಕ್ಕೆ ಕೇಂದ್ರಸರ್ಕಾರ ಆದ್ಯತೆ ನೀಡಿರುವ ಜತೆಗೆ, ಮಂಡ್ಯ ಜಿಲ್ಲೆಯಲ್ಲಿ ಆಟೋಮೋಟಿವ್ ರೀಸರ್ಚ್ ಅಸೋಸಿಯೆಷನ್ ಆಫ್ ಇಂಡಿಯಾ(ಎಆರ್‌ಎಐ)ಸೆಂಟರ್ ತೆರೆಯಲು 500 ಕೋಟಿ ರೂ.ಮೀಸಲಿಟ್ಟು, ನೂರು ಎಕರೆ ಜಾಗ ಕೊಡುವಂತೆ ರಾಜ್ಯಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಕೇಂದ್ರದ ಭಾರಿ, ಉಕ್ಕು ಮತ್ತು ಕಾರ್ಖಾನೆ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ನಗರದ ಸರ್ಕಾರಿ ಅತಿಥಿಗೃಹದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಹಲವಾರು ಯೋಜನೆಗಳನ್ನು ನೀಡಿದೆ. ಎಚ್.ಡಿ.ಕುಮಾರಸ್ವಾಮಿ ಮಂಡ್ಯ ಜಿಲ್ಲೆಗೆ ಏನು ಮಾಡಿಲ್ಲ, ಯಾವ ಕಾರ್ಖಾನೆ ತಂದಿಲ್ಲ ಎನ್ನುವ ಮಾತನ್ನು ಶಾಸಕರು ಹೇಳುತ್ತಿದ್ದರು. ಕಾರ್ಖಾನೆ ತಂದರೆ ನಾವೇ ನೂರು ಎಕರೆ, ಇನ್ನೂರು ಎಕರೆ ಜಾಗ ಕೊಡಿಸಲು ತಯಾರಿದ್ದೇವೆ ಎನ್ನುವ ಟೀಕೆ ಮಾಡುತ್ತಿದ್ದರು. ಈಗ ಮೋದಿ ಸರ್ಕಾರ ಕೈಗಾರಿಕಾ ಕ್ಷೇತ್ರದ ಸುಧಾರಣೆ ಮತ್ತು ಬೆಳವಣಿಗೆಗೆ ರೂಪಿಸಿರುವ ಯೋಜನೆಗಳಲ್ಲಿ ಕರ್ನಾಟಕಕ್ಕೂ ಹಲವು ಯೋಜನೆ ನೀಡಿದ್ದಾರೆ ಎಂದು ತಿಳಿಸಿದರು.
ಮಂಡ್ಯ ಜಿಲ್ಲೆಯಲ್ಲಿ 500 ಕೋಟಿ ರೂ.ವೆಚ್ಚದಲ್ಲಿ ಎಆರ್‌ಎಐ ಸೆಂಟರ್ ಸ್ಥಾಪನೆಗೆ ನೂರು ಎಕರೆ ಜಾಗ ಕೊಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಆಟೋಮೊಬೈಲ್ ಕ್ಷೇತ್ರದಲ್ಲಿ ಹೊರದೇಶದಿಂದ ಬಿಡಿಭಾಗಗಳನ್ನು ಆಮದು ಮಾಡಿಕೊಳ್ಳುವ ಬದಲಿಗೆ ದೇಶದಲ್ಲೇ ಉತ್ಪಾದಿಸಲು ಹೆಚ್ಚಿನ ಸಂಶೋಧನೆ, ಉತ್ತೇಜನ ನೀಡುವುದಕ್ಕೆ ಕಾರಣವಾಗಲಿದೆ. ರಾಜ್ಯಸರ್ಕಾರ ಜಾಗ ಕೊಟ್ಟ ತಕ್ಷಣವೇ ಪ್ರಕ್ರಿಯೆ ಶುರುವಾಗಲಿದೆ ಎಂದು ಹೇಳಿದರು.
ಹೊರ ದೇಶಗಳಿಂದ ನಾವು ಆಮದು ಮಾಡಿಕೊಳ್ಳುವುದನ್ನು ತಡೆಯಲು ಈ ಸೆಂಟರ್ ಅನುಕೂಲವಾಗಲಿದೆ. ಅದೇ ರೀತಿ ರಕ್ಷಣಾ ವಲಯದ ವಸ್ತುಗಳು, ಡ್ರಿಲ್ಲಿಂಗ್ ಯಂತ್ರೋಪಕರಣಗಳ ಬಿಡಿಭಾಗಗಳನ್ನು ಉತ್ಪಾದಿಸುವ ಮ್ಯಾನುಫ್ಯಾಕ್ಚರಿಂಗ್ ಕಂಪೆನಿಗಳ ಮುಖ್ಯಸ್ಥರೊಂದಿಗೆ ಚರ್ಚಿಸಿದ್ದೇನೆ. ಮಂಡ್ಯ ಜಿಲ್ಲೆಯಲ್ಲಿ ಟೆಸ್ಟಿಂಗ್ ಸೆಂಟರ್ ಆರಂಭಿಸಲು ಬೇಕಾದ ಕ್ರಮಕೈಗೊಳ್ಳಲಾಗುವುದು ಎಂದರು.
ಭಾರಿ ಉಕ್ಕು ಜತೆಗೆ ಪ್ರಧಾನಿ ನರೇಂದ್ರಮೋದಿ ಅವರು ಮ್ಯಾಗ್ನೇಟ್ ತಯಾರಿಕೆಗೆ 7,270 ಕೋಟಿ ರೂ.ನೀಡಿದ್ದಾರೆ. ಈ ಮ್ಯಾಗ್ನೇಟ್ ತಯಾರಿಕೆಯಿಂದ ದುಪ್ಪಟ್ಟು ಆದಾಯ ಬರುವ ಜತಗೆ,ಕರ್ನಾಟಕಕ್ಕೆ ಹೆಚ್ಚು ಆದಾಯ ಬರಲಿದೆ. ಸೆಮಿಕಂಡಕ್ಟರ್, ಹೈಸ್ಪೀಡ್ ರೈಲು, ಎಂಎಸ್‌ಎಂಇ ಕ್ಷೇತ್ರಗಳಿಗೆ ಮೀಸಲಿಟ್ಟಿರುವ ಅನುದಾನದಲ್ಲಿ ಕರ್ನಾಟಕಕ್ಕೆ 10 ಸಾವಿರ ಕೋಟಿ ರೂ.ಬರಲಿದೆ ಎಂದು ವಿವರಿಸಿದರು.
ಭದ್ರಾವತಿ ಉಕ್ಕು ಮತ್ತು ಸ್ಟೀಲ್ ಕಾರ್ಖಾನೆ ಪುನಶ್ಚೇತನಕ್ಕೆ 4,500 ಕೋಟಿ ರೂ.ನೀಡಲಾಗಿದೆ. ಎಚ್‌ಎಂಟಿಯನ್ನು ಪುನಶ್ಚೇತನಗೊಳಿಸಲು ಕೇಂದ್ರಸರ್ಕಾರ ನಿರ್ಧರಿಸಿದ್ದರೆ, ರಾಜ್ಯದ ಅರಣ್ಯ ಸಚಿವ ಈಶ್ವರ್ ಬಿ.ಖಂಡ್ರೆ ಅವರು ಭೂಮಿಯ ವಿಚಾರದಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅರಣ್ಯ ಇಲಾಖೆಗೆ ಸೇರಿದ ಭೂಮಿಯನ್ನು ಹಿಂದೆ ಯಾರು ಮಾರಾಟ ಮಾಡಿದ್ದಾರೆ ಗೊತ್ತಿಲ್ಲ. ಆದರೆ,ಈಗ ಅದನ್ನು ಮುಂದಿಟ್ಟುಕೊಂಡು ತಕರಾರು ತೆಗೆಯಲಾಗಿದೆ. ಆದರೆ, ಯಾವುದೇ ಲೆಕ್ಕ ಇಲ್ಲದೆ 65 ಎಕರೆ ಭೂಮಿಯನ್ನು ಖಾಸಗಿ ಸಂಸ್ಥೆಗಳಿಗೆ ಹಂಚಿಕೆ ಮಾತ್ರ ಮಾಡಲಾಗಿದೆ. ಕುದುರೆಮುಖದಲ್ಲಿ ಅದಿರು ತೆಗೆಯಲು ಬಿಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಿಂದಲೇ ಅಸಹಕಾರ
ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಕೇಂದ್ರ ಸಚಿವರು, ಸಂಸದರು ಸದಾ ಮುಂದಿರುತ್ತಾರೆ. ಯಾವುದೇ ವಿಚಾರವನ್ನು ನಿಮ್ಮ ಮುಂದೆ ಮಾತನಾಡಬೇಕಿಲ್ಲ.ಎಲ್ಲಿ ಮಾತನಾಡಬೇಕೋ ಅಲ್ಲಿಯೇ ಮಾತನಾಡುತ್ತೇವೆ. ಆದರೆ, ರಾಜ್ಯದಿಂದಲೇ ಅಸಹಕಾರವಾಗುತ್ತಿದೆ ಎಂದು ಅಸಮಾಧಾನ ಹೊರ ಹಾಕಿದರು.
ಕೇಂದ್ರದಲ್ಲಿ ಮಂತ್ರಿಯಾಗಿ ಒಂದು ಮುಕ್ಕಾಲು ವರ್ಷವಾಗಿದೆ. ಯಾವುದೇ ಸಚಿವರು ಕೇಂದ್ರದಿಂದ ಇಂತಹ ಯೋಜನೆಗಳಾಗಬೇಕು ಎನ್ನುವ ಪ್ರಸ್ತಾಪ ತಂದಿಲ್ಲ. ಕೇಂದ್ರಸರ್ಕಾರ, ಮೋದಿ ಅವರನ್ನು ಟೀಕಿಸುವುದು ಬಿಟ್ಟರೆ ಬೇರೇನೂ ಮಾಡಿದ್ದಾರೆ. ಮುಖ್ಯಮಂತ್ರಿಗಳನ್ನು ಸಭೆ ಕರೆಯುವಂತೆ ಹೇಳಿದರೂ ಮಾತನಾಡಿಲ್ಲ. ಮೊದಲು ರಾಜ್ಯಸರ್ಕಾರ ತನ್ನ ನಡವಳಿಕೆ ಬದಲಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮೆಕ್ಕೆಜೋಳ, ಕೊಬ್ಬರಿ ಖರೀದಿ ಅಂದರೂ ಕೇಂದ್ರಸರ್ಕಾರದ ಕಡೆಗೆ ಬೆರಳು ತೋರಿಸುತ್ತಾರೆ. ಮೆಟ್ರೋ ದರ ಏರಿಕೆ ವಿಚಾರದಲ್ಲಿ ಕೇಂದ್ರದ್ದು ಪಾತ್ರವಿಲ್ಲ. ಕೇಂದ್ರಸರ್ಕಾರ ದರ ಏರಿಕೆ ಮಾಡದಂತೆ ಹೇಳಿದ್ದರೂ ಯಾವುದೇ ಪತ್ರ ಬಂದಿಲ್ಲವೆಂದು ರಾಜ್ಯದ ಅಧಿಕಾರಿಗಳು ಹೇಳುತ್ತಾರೆ. ರಾಜ್ಯದಲ್ಲಿ ಮಾಡಿರುವ ಸಾಲದ ಕಂತನ್ನು ಕಟ್ಟಲು ಹಣವಿಲ್ಲದೆ ದರ ಏರಿಕೆ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
14ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಬರಬೇಕಾದ ಪಾಲು ಬಂದರೂ 15ರಲ್ಲಿ ಕಡಿಮೆಯಾಗಿತ್ತು. ಈಗ 16ನೇ ಹಣಕಾಸು ಆಯೋಗದಲ್ಲಿ ಸರಿಪಡಿಸಿ 50 ಸಾವಿರ ಕೋಟಿ ರೂ.ಬದಲಿಗೆ 63 ಸಾವಿರ ಕೋಟಿ ರೂ.ಕೊಡಲಾಗಿದೆ. ಮುಂದಿನ ವರ್ಷಗಳಿಂದ 13 ಸಾವಿರ ಕೋಟಿ ರೂ.ಹೆಚ್ಚುವರಿಯಾಗಿ ದಕ್ಕಲಿದೆ. 17 ಬಾರಿ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರಿಗೆ ದೂರದೃಷ್ಟಿತ್ವ ಗೊತ್ತಿಲ್ಲ ಎಂದು ಛೇಡಿಸಿದರು.
ರಾಜ್ಯದ ಸಚಿವರಲ್ಲೇ ವಿಶ್ವಾಸವಿಲ್ಲ
ಕೇಂದ್ರದೊಂದಿಗೆ ವಿಶ್ವಾಸದಲ್ಲಿ ಇರುವುದು ಬೇಡ. ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವರಲ್ಲಿ ವಿಶ್ವಾಸವಿಲ್ಲ. ಪರಸ್ಪರ ವಿಶ್ವಾಸದ ಕೊರತೆ ಕಾಣಿಸುತ್ತಿದೆ. ಜಾ.ದಳದ ಕಥೆ ಮುಗಿದು ಹೋಯಿತು ಎನ್ನುವಂತೆ ಕೆಲವರು ಭಾವಿಸಿದ್ದರು. ಕೇಂದ್ರದಲ್ಲಿ ಮಂತ್ರಿಯಾಗಿ ಬಿಟ್ಟರೆಂಬ ಅಸೂಯೆ ಕೆಲವರಲ್ಲಿ ಇದೆ ಎಂದು ಲೇವಡಿ ಮಾಡಿದರು.
ಡಿ.ದೇವರಾಜ ಅರಸು ನಂತರ ದೀರ್ಘಾವದಿ ದಿನಗಳ ಸಿಎಂ ಎಂಬ ದಾಖಲೆ ಬರೆದಿರುವ ಸಿದ್ದರಾಮಯ್ಯ, ಈಗ ದಾಖಲೆ ಬಜೆಟ್ ಮಂಡನೆಗೆ ಸಜ್ಜಾಗುತ್ತಿದ್ದಾರೆ. ಅದರ ಹಮ್ಮು-ಬಿಮ್ಮು ಇಟ್ಟುಕೊಂಡು ಮಾತನಾಡುತ್ತಿದ್ದಾರೆ. ರಾಜ್ಯವನ್ನು ದಿವಾಳಿ ಎಬ್ಬಿಸಿ ಹೋಗುವುದೇ ಅವರ ದಾಖಲೆಯ ಬಜೆಟ್ ಆಗಿರುತ್ತದೆ ಎಂದು ಟೀಕಿಸಿದರು.
ಕಳೆದ ಎರಡೂವರೆ ವರ್ಷಗಳಿಂದ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ನಾಯಕತ್ವ ಬದಲಾವಣೆ ಬಗ್ಗೆ ಬರೀ ಚರ್ಚೆ ಮಾಡಿಕೊಂಡು ಕಾಲಹರಣ ಮಾಡಲಾಗುತ್ತಿದೆ. ಎಲ್ಲಿ ಚರ್ಚೆ ಮಾಡಬೇಕೋ ಅಲ್ಲಿ ಮಾಡದೆ ಬೀದಿ-ಬೀದಿಯಲ್ಲಿ ಚರ್ಚೆ ಮಾಡಿದರೆ ಪ್ರಯೋಜನವಿಲ್ಲ. ಸಿಎಂ ಬದಲಾವಣೆ ಮಾಡುವುದು, ಬಿಡುವುದು ನಮಗೆ ಮುಖ್ಯವಲ್ಲ. ರಾಜ್ಯದ ಜನರು ಒಳ್ಳೆಯ ಆಡಳಿತ ನೀಡಲೆಂದು 136 ಸ್ಥಾನಗಳನ್ನು ಕೊಟ್ಟಿದ್ದಾರೆ. ಅದರಂತೆ ಕೆಲಸ ಮಾಡದೆ ದುರಾಡಳಿತ ನಡೆಯುತ್ತಿದೆ ಎಂದು ಆರೋಪಿಸಿದರು.
ಮಧ್ಯರಾತ್ರಿ ನಾಟಕ
ಅಬ್ಕಾರಿ ಇಲಾಖೆಯಲ್ಲಿ ಲಂಚ ಪಡೆಯುವಾಗ ಸಿಕ್ಕಿಬಿದ್ದ ಆರೋಪಿಗಳನ್ನು ರಕ್ಷಿಸಲು ಮಧ್ಯರಾತ್ರಿ 2 ಗಂಟೆ ತನಕ ನಾಟಕ ಮಾಡಲಾಯಿತು. 25 ಲಕ್ಷ ರೂ. ಹಣ ಪಡೆಯುವಾಗ ನೇರವಾಗಿ ಸಿಕ್ಕಿಬಿದ್ದರೂ ಅಬ್ಕಾರಿ ಸಚಿವರಿಂದ ರಾಜೀನಾಮೆ ಪಡೆಯಲಿಲ್ಲ. ಅವರನ್ನು ರಕ್ಷಿಸಲು ಮುಖ್ಯಮಂತ್ರಿಗಳೇ ವ್ಯೂಹ ರಚನೆ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕರಾದ ಜಿ.ಡಿ.ಹರೀಶ್ ಗೌಡ, ಟಿ.ಎಸ್.ಶ್ರೀವತ್ಸ, ಮಾಜಿ ಸಚಿವ ಸಾ.ರಾ.ಮಹೇಶ್,ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮಾಜಿ ಶಾಸಕರಾದ ಎಂ.ಅಶ್ವಿನ್ ಕುಮಾರ್, ಕೆ.ಮಹದೇವು, ಎಲ್.ನಾಗೇಂದ್ರ, ಬಿಜೆಪಿ ರಾಜ್ಯವಕ್ತಾರ ಎಂ.ಜಿ.ಮಹೇಶ್, ಎಚ್.ಡಿ.ಕೋಟೆ ಕೃಷ್ಣನಾಯಕ, ಜಿಪಂ ಮಾಜಿ ಅಧ್ಯಕ್ಷ ಸಿ.ಜೆ.ದ್ವಾರಕೀಶ್,ಮಾಜಿ ಮಹಾಪೌರ ಆರ್.ಲಿಂಗಪ್ಪ, ಮಾಜಿ ಸದಸ್ಯರಾದ ಅಶ್ವಿನಿ ಅನಂತು, ಎಂ.ಎಸ್.ಶೋಭಾ ಮತ್ತಿತರರು ಹಾಜರಿದ್ದರು.





