Mysore
18
overcast clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

1 ರೂ. ಹೆಚ್ಚಾಗಿ ಪಡೆದಿದ್ದಕ್ಕೆ 30 ಸಾವಿರ ರೂ. ದಂಡ!

Rs. 30 thousand fine for receiving Rs. 1 more!

ಮೈಸೂರು: ಟಿಕೆಟ್ ದರಗಳನ್ನು ಪೂರ್ಣಾಂಕ ಗೊಳಿಸುವ ಪದ್ಧತಿಯ ಅಡಿಯಲ್ಲಿ ಪ್ರಯಾಣಿಕರಿಂದ ಅನ್ಯಾಯವಾಗಿ 1 ರೂ. ಹೆಚ್ಚುವರಿ ವಸೂಲಿ ಮಾಡಿದ್ದಕ್ಕಾಗಿ ಮೈಸೂರು ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗವು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ 30 ಸಾವಿರ ರೂ. ದಂಡ ವಿಧಿಸಿದೆ.

ಆಯೋಗದ ಅಧ್ಯಕ್ಷರಾದ ಎ. ಕೆ. ನವೀನ್ ಕುಮಾರಿ ಮತ್ತು ಸದಸ್ಯರಾದ ಎಂ. ಕೆ. ಲಲಿತಾ ಅವರನ್ನು ಒಳಗೊಂಡ ಆಯೋಗವು, ಹೆಚ್ಚುವರಿ ಪ್ರಯಾಣ ದರವನ್ನು ಮರು ಪಾವತಿಸುವಂತೆ ಮತ್ತು ದೂರು ದಾರರಿಗೆ ಮಾನಸಿಕ ನೋವಿಗೆ 25,000 ರೂ. ಪರಿಹಾರವನ್ನು ಮತ್ತು ನ್ಯಾಯಾಲಯದ ವೆಚ್ಚವಾಗಿ 5000 ರೂ.ಗಳನ್ನು ಪಾವತಿಸುವಂತೆ ಕೆ. ಎಸ್. ಆರ್. ಟಿ. ಸಿಗೆ ನಿರ್ದೇಶಿಸಿದೆ. ಒಟ್ಟಾರೆಯಾಗಿ ಜುಲೈ 7ರ ಆದೇಶದ ದಿನಾಂಕದಿಂದ ಒಂದು ತಿಂಗಳೊಳಗೆ 30,001 ರೂ. ಗಳನ್ನು ಪಾವತಿಸಲು ಆದೇಶಿಸಲಾಗಿದೆ.

ದೂರುದಾರರಾದ ಮೈಸೂರು ಮೂಲದ ವಕೀಲ ಜೆ. ಕಿರಣ್ ಕುಮಾರ್, ಚಾಮರಾಜ ನಗರದ ಹೂಗ್ಯಂ ಗ್ರಾಮದ ನಿವಾಸಿಯಾಗಿದ್ದು, ಡಿಸೆಂಬರ್ 31, 2024ರಂದು ಮೈಸೂರಿನಿಂದ ಬೆಂಗಳೂರಿಗೆ ಕೆಎಸ್‌ಆರ್‌ಟಿಸಿ ಐರಾವತ ಮಲ್ಟಿ-ಆಕ್ಸಲ್ ಬಸ್‌ನಲ್ಲಿ ಪ್ರಯಾಣಿಸಿದ್ದರು. ಅವರು ಯುಪಿಐ ವಹಿವಾಟಿನ ಮೂಲಕ 390 ರೂ. ಪಾವತಿಸಿದ್ದರು. ಇದರಲ್ಲಿ ಮೂಲ ದರ 370 ರೂ. , ಜಿಎಸ್‌ಟಿ 19 ರೂ. ಮತ್ತು ಟಿಕೆಟ್ ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾದ ಹೆಚ್ಚುವರಿ 1 ರೂ. ಸೇರಿತ್ತು. ಈ ಸಂಬಂಧ ವಿಶೇಷವಾಗಿ 1 ರೂ. ಶುಲ್ಕವು ನ್ಯಾಯಸಮ್ಮತವಲ್ಲ ಎಂಬುದು ಕಿರಣ್ ಅವರ ವಾದ.

ಹೆಚ್ಚುವರಿ ಶುಲ್ಕದ ಬಗ್ಗೆ ಕಂಡಕ್ಟರ್ ಅವರನ್ನು ಸಂಪರ್ಕಿಸಿದಾಗ, ಅದು ಪ್ರಯಾಣ ವಿಮೆಗಾಗಿ ಎಂದು ತಿಳಿಸಿದ್ದಾರೆ. ಇದು ದಾರಿ ತಪ್ಪಿಸುವ ಮತ್ತು ನ್ಯಾಯ ಸಮ್ಮತವಲ್ಲದ ಪೂರ್ವ ನಿಯೋಜಿತ ಮಾತುಗಳು ಎಂಬುದು ಕಿರಣ್‌ಗೆ ಗೊತ್ತಾಗಿದೆ. ಹೆಚ್ಚುವರಿ ಪ್ರಯಾಣ ದರವನ್ನು ಮರುಪಾವತಿಸುವಂತೆ ಮತ್ತು ಅನನುಕೂಲತೆ ಮತ್ತು ಅಧಿಕ ಶುಲ್ಕ ವಿಧಿಸಿದ್ದಕ್ಕಾಗಿ ಪರಿಹಾರ ವಾಗಿ 1 ಲಕ್ಷ ರೂ. ಗಳನ್ನು ಕೋರಿ ಫೆಬ್ರವರಿ 10, 2025ರಂದು ಅವರು ಆಯೋಗದಲ್ಲಿ ಪ್ರಕರಣ ದಾಖಲಿಸಿದರು. ನನ್ನ ಡಿಜಿಟಲ್ ಪಾವತಿಯ ಹೊರ ತಾಗಿಯೂ ಕೆಎಸ್‌ಆರ್‌ಟಿಸಿ ಪೂರ್ಣಾಂಕದ ಮೊತ್ತವನ್ನು ವಿಧಿಸಿತು. ಇದು ಪ್ರತಿಯೊಬ್ಬ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಅನ್ಯಾ ಯದ ವ್ಯವಹಾರವಾಗಿದೆ ಎಂದು ಅವರು ಆಯೋಗಕ್ಕೆ ಮನವರಿಕೆ ಮಾಡಿದರು. ಆಯೋ ಗದ ಮುಂದೆ ವಾದವನ್ನು ಮಂಡಿಸಿದ ಅವರು, ಕೆಎಸ್‌ಆರ್‌ಟಿಸಿ ಪ್ರತಿದಿನ ಸುಮಾರು 35 ಲಕ್ಷ ಪ್ರಯಾಣಿಕರನ್ನು ಸಾಗಿಸುತ್ತದೆ. ಇದರಲ್ಲಿ 3.44 ಲಕ್ಷಕ್ಕೂ ಹೆಚ್ಚು ಐಷಾರಾಮಿ ಬಸ್ ಪ್ರಯಾಣಿಕರು ಸೇರಿದ್ದಾರೆ ಎಂದು ಗಮನ ಸೆಳೆದರು.

ಮಾಸಿಕ ಅಂದಾಜಿನ ಪ್ರಕಾರ, ಪ್ರತಿ ತಿಂಗಳು ಒಂದು ಕೋಟಿಗೂ ಹೆಚ್ಚು ಪ್ರಯಾಣಿಕರು ಐಷಾರಾಮಿ ಬಸ್‌ಗಳಲ್ಲಿ ಪ್ರಯಾಣಿಸುತ್ತಾರೆ. ವಾರ್ಷಿಕವಾಗಿ ಸಂಖ್ಯೆ 12 ಕೋಟಿ ತಲುಪುತ್ತದೆ. ಪ್ರತಿ ಐಷಾರಾಮಿ ಬಸ್ ಪ್ರಯಾಣಿಕರಿಂದ ಶುಲ್ಕವಾಗಿ 1 ರೂ. ಸಂಗ್ರಹಿಸುವ ಮೂಲಕ, ಕೆಎಸ್‌ಆರ್‌ಟಿಸಿ ವರ್ಷಕ್ಕೆ ಸುಮಾರು 12.39 ಕೋಟಿ ರೂ. ಗಳನ್ನು ಅನ್ಯಾಯದ ಕಾರ್ಯ ವಿಧಾನದ ಮೂಲಕ ಗಳಿಸುತ್ತದೆ ಎಂದು ಕಿರಣ್ ಆರೋಪಿಸಿದರು. ಕಿರಣ್ ಅವರ ವಾದ ವನ್ನು ಗಮನಿಸಿದ ಆಯೋಗ ಕೆಎಸ್‌ಆರ್‌ಟಿಸಿ ತನ್ನ ನಿಯಮಗಳನ್ನು ಪಾಲಿಸಲು ವಿಫಲ ವಾಗಿದೆ. ಹೀಗಾಗಿ ದೂರುದಾರರಿಗೆ 30.001 ರೂ. ಪರಿಹಾರ ನೀಡುವಂತೆ ಆದೇಶಿಸಿದೆ.

ಹೆಚ್ಚುವರಿ ರೌಂಡ್ ಆಫ್ ನೀತಿ ವಾಪಸ್: ನಿಗದಿತ ದರಕ್ಕಿಂತ ಹೆಚ್ಚುವರಿ ಶುಲ್ಕವನ್ನು ವಸೂಲಿ ಮಾಡುತ್ತಿದ್ದ ಬಗ್ಗೆ ಬಸ್ ಪ್ರಯಾಣಿಕರಿಂದ ತೀವ್ರ ಆಕ್ಷೇಪಣೆಗಳು ಬರುತ್ತಿದ್ದ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ತನ್ನ ಕೆಲವು ಪ್ರೀಮಿಯಂ ಬಸ್ ಸೇವೆಗಳ ಪ್ರಯಾಣ ದರದಲ್ಲಿ ವಸೂಲಿ ಮಾಡುತ್ತಿದ್ದ ಹೆಚ್ಚುವರಿ ರೌಂಡ್ ಆಫ್ ನೀತಿಯನ್ನು ಹಿಂಪಡೆದಿದೆ.

ಬಾಕಿ ಚಿಲ್ಲರೆ ನೀಡುವಿಕೆಯಲ್ಲಿ ಆಗುತ್ತಿದ್ದ ತೊಂದರೆಯನ್ನು ತಪ್ಪಿಸಲು ಕೆಎಸ್‌ಆರ್‌ಟಿಸಿಯು ತನ್ನ ಕೆಲವು ಆಯ್ದ ಬಸ್‌ಗಳ(ರಾಜಹಂಸ, ವೋಲ್ವೋ ಮತ್ತು ಸ್ಲೀಪರ್ ಬಸ್) ಸೇವೆಗೆ ನಿಗದಿತ ಪ್ರಯಾಣ ದರವನ್ನು ಪೂರ್ಣಾಂಕಗೊಳಿಸಿ ವಸೂಲಿ ಮಾಡುವ ಅವಕಾಶವನ್ನು ಬಸ್ ನಿರ್ವಾಹಕರಿಗೆ ನೀಡಿ ನಿಯಮವನ್ನು ೨೦೧೬ ರಿಂದ ಜಾರಿಗೆ ತಂದಿತ್ತು. ಇದರ ಪ್ರಕಾರ ಟಿಕೆಟ್ ದರ ೩೬ ರೂ. ಇದ್ದರೆ ಅದನ್ನು ೪೦ ರೂ. ಗೆ, ೪೧ ರೂ. ಇದ್ದರೆ ಅದನ್ನು ೪೫ ರೂ. ಗೆ ಹೆಚ್ಚಿಸಲು ಅವಕಾಶವಿತ್ತು. ಹೆಚ್ಚುವರಿ ಶುಲ್ಕವನ್ನು ರೌಂಡೆಡ್ ಆಫ್ ಎಂದು ಟಿಕೆಟ್‌ನಲ್ಲಿ ಕಾಣಿಸಲಾಗುತ್ತಿತ್ತು. ಹಾಗಿದ್ದರೂ ಯುಪಿಐ ಬೆಂಬಲಿತ ಪಾಯಿಂಟ್ ಆಫ್ ಸೇಲ್ (ಪಿಒಎಸ್) ಇಂಟೆಲಿಜೆಂಟ್ ಟಿಕೆಟಿಂಗ್ ಮೆಷಿನ್ (ಐಟಿಎಂ) ಅಳವಡಿಕೆಯ ಹಿನ್ನೆಲೆಯಲ್ಲಿ ಕೆಎಸ್‌ಆರ್ ಟಿಸಿಯು ರೌಂಡ್ ಆಫ್ ಮಾಡುವ ಕ್ರಮವನ್ನು ಸ್ಥಗಿತಗೊಳಿಸಿತು.

ಈ ಸಂಬಂಧ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷಾ ಅವರು, ಪ್ರಯಾಣ ದರದಲ್ಲಿ ರೌಂಡ್ ಆಫ್ ನಿಯಮವನ್ನು ಹಿಂಪಡೆಯಲಾಗಿದೆ ಎಂದು ಜುಲೈ 3ರಂದು ಅಧಿಕೃತ ಪ್ರಕಟಣೆ ನೀಡಿದ್ದರು.

Tags:
error: Content is protected !!