Mysore
16
overcast clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ಡ್ರಗ್ಸ್‌ ಪ್ರಕರಣ ಕುರಿತ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಜಾಥ

ಮೈಸೂರು : ಮೈಸೂರು ನಗರದಲ್ಲಿ ಮಾದಕ ದ್ರವ್ಯ ಪ್ರಕರಣ ಪತ್ತೆಯಾಗಿರುವುದರಿಂದ ಉನ್ನತ ಮಟ್ಟದ ತನಿಖೆ ನಡೆಸುವಂತೆ ಒತ್ತಾಯಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಮಾದಕ ದ್ರವ್ಯ ಮುಕ್ತ ನಗರಿ ಬಗ್ಗೆ ಜಾಗೃತಿ ಜಾಥಾ ನಡೆಸಲಾಯಿತು.

ನಗರದ ಬಸವೇಶ್ವರ ವೃತ್ತದಿಂದ ಹೊರಟ ಕಾರ್ಯಕರ್ತರು ಪ್ರಮುಖ ಬೀದಿಗಳಲ್ಲಿ ಸಾಗಿ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು. ನಂತರ, ರಾಜ್ಯಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಎನ್.ಆರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಗರ ಪೊಲೀಸರ ಸಹಕಾರದೊಡನೆ ಮಹಾರಾಷ್ಟ್ರ ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡ ಮಾದಕ ವಸ್ತುಗಳ ಪ್ರಮಾಣಕ್ಕೆ ಸಂಬಂಧಿಸಿದಂತೆ ಅಲ್ಲಿನ ಪೊಲೀಸರು ಹಾಗೂ ನಗರ ಪೊಲೀಸರು ನೀಡಿರುವ ಮಾಹಿತಿಗೂ ವ್ಯತ್ಯಾಸವಿದೆ ಎಂದು ಆರೋಪಿಸಿದರು.

ಎರಡು ರಾಜ್ಯಗಳ ಅಧಿಕಾರಿಗಳ ಹೇಳಿಕೆಗಳು ದ್ವಂದ್ವವಾಗಿವೆ. ದಾಳಿ ಬಳಿಕ ಎನ್.ಆರ್. ಠಾಣಾಧಿಕಾರಿ ಲಕ್ಷ್ಮೀಕಾಂತ ತಳವಾರ್ ಅವರನ್ನು ಅಮಾನತುಗೊಳಿಸಿ, ಮರುದಿನವೇ ಅದನ್ನು ರದ್ದುಗೊಳಿಸಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿವೆ. ಇವರನ್ನೇ ದೂರುದಾರರನ್ನಾಗಿಸಿರುವುದು ಸರಿಯಲ್ಲ ಎಂದರು.

ಮಾದಕ ದ್ರವ್ಯ ತಯಾರಿಕಾ ಘಟಕ ಠಾಣಾ ವ್ಯಾಪ್ತಿಯಲ್ಲೇ ಇದ್ದರೂ ಇವರು ಏಕೆ ಸುಮ್ಮನಿದ್ದರು ಎಂಬುದರ ಬಗ್ಗೆ ತನಿಖೆ ನಡೆಸಬೇಕು. ಇನ್ನು ಮಾದಕ ವಸ್ತು ಕಳ್ಳ ಸಾಗಣೆ ಮತ್ತು ದುರುಪಯೋಗ ವಿರುದ್ಧ ಕೇಂದ್ರ ನಾರ್ಕೊಟಿಕ್ ಕಂಟ್ರೋಲ್ ಬ್ಯೂರೋಗೆ ತಾವು ದೂರು ಸಲ್ಲಿಸಲಿದ್ದೇವೆ ಎಂದು ತಿಳಿಸಿದರು.

ಮೈಸೂರು ನಗರ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಸ್ವಚ್ಛ ನಗರಿ ಮತ್ತು ಸಾಂಸ್ಕೃತಿಕ ನಗರಿ ಎಂಬ ಹೆಸರು ವಾಸಿಯೂ ಆಗಿದ್ದು, ದೇಶ-ವಿದೇಶಿಗರ ಪ್ರವಾಸಿತಾಣವು ಆಗಿದೆ. ಇದನ್ನೇ ಬಂಡವಾಳ ಮಾಡಿಕೊಂಡು ಸಮಾಜಘಾತುಕಶಕ್ತಿಗಳು ಮೈಸೂರು ನಗರ ಮತ್ತು ಸುತ್ತಮುತ್ತ ಕಾನೂನುಬಾಹಿರವಾಗಿ ಮಾದಕದ್ರವ್ಯ ಉತ್ಪಾದನೆ ಮಾಡುವುದು ಮತ್ತು ಸೇವೆನೆ ಮಾಡುವುದು ಅತಿ ಹೆಚ್ಚಾಗಿ ಕಂಡುಬರುತ್ತಿದೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ಮತ್ತೊಮ್ಮೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ವಿಫಲವಾಗಿದೆ. ಅದಕ್ಕಾಗಿ ಕೂಡಲೇ ಈ ಪ್ರಕರಣದಲ್ಲಿ ಎನ್.ಆರ್.ಠಾಣೆಯ ವೃತ್ತ ನಿರೀಕ್ಷಕ ಲಕ್ಷ್ಮೀಕಾಂತ್ ತಳವಾರ್ ವಿರುದ್ದ ಎಫ್ಐಆರ್ ದಾಖಲಿಸಿ ಬಂಧಿಸಬೇಕು. ಸೇವೆಯಿಂದ ಅಮಾನತುಪಡಿಸಿದ್ದ ಪೊಲೀಸ್ ಆಯುಕ್ತರು ವಾಪಸ್ ಪಡೆದಿರುವುದನ್ನು ನೋಡಿದರೆ ಕಾಣದ ಕೈಗಳ ಕೈವಾಡ ಇರುವುದು ತನಿಖೆಯಲ್ಲಿ ತಿಳಿಸಬೇಕಿದೆ. ಆದ್ದರಿಂದ ಪೊಲೀಸರು ಡ್ರಗ್ಸ್ ಪ್ರಕರಣ‌ ತನಿಖೆ ಮಾಡುವುದು ಸೂಕ್ತವಲ್ಲ. ಉನ್ನತ ಮಟ್ಟದ ತನಿಖೆಗೆ ಒಪ್ಪಿಸಬೇಕು ಎಂದರು.

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಉಪಾಧ್ಯಕ್ಷ ಕೆ.ಎಸ್. ಸೋಮಸುಂದರ, ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ. ರವಿಕುಮಾರ್‌, ಮೈಸೂರು ನಗರ ಅಧ್ಯಕ್ಷ ಎಸ್. ನಾಗೇಂದ್ರ, ನಗರ ಘಟಕದ ಪ್ರಧಾನ ಕಾರ್ಯದರ್ಶಿ ರವಿ ಗೌಡ, ಗ್ರಾಮಾಂತರ ಅಧ್ಯಕ್ಷ ರವೀಂದ್ರ, ಗ್ರಾಮಾಂತರ ಘಟಕ ಪ್ರಧಾನ ಕಾರ್ಯದರ್ಶಿ ಹರೀಶ್, ಮಹಾದೇವಮ್ಮ, ನಾಗರಾಜ್ ಆರ್ ವೇಣುಗೋಪಾಲ್, ಜಗದೀಶ್ ಲೋಕೇಶ್ ಸುಂದರಪ್ರೇಮ್ ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.

Tags:
error: Content is protected !!