ಮೈಸೂರು: ಆರ್‌ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತದಿಂದ ಉಂಟಾದ ಸಾವು-ನೋವುಗಳಿಗೆ ಪೊಲೀಸ್ ಇಲಾಖೆ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣ ಆಡಳಿತ ಮಂಡಳಿಯ ನಿರ್ಲಕ್ಷ್ಯ ಕಾರಣವೇ ಹೊರತು ರಾಜ್ಯ ಸರ್ಕಾರವಲ್ಲ ಎಂದು ನಗರ ಕಾಂಗ್ರೆಸ್ ವಕ್ತಾರ ಎಸ್.ರಾಜೇಶ್ ಆರೋಪಿಸಿದರು. ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯೋತ್ಸವವನ್ನು ವೀಕ್ಷಿಸಲು ಲಕ್ಷಾಂತರ ಜನರು ಸಾಗರೋಪಾದಿಯಲ್ಲಿ ಬರುತ್ತಿರುವುದು ಕಂಡುಬಂದರೂ ಕ್ರೀಡಾಂಗಣ ಆಡಳಿತ ಮಂಡಳಿ ಕ್ರೀಡಾಂಗಣದ ಎಲ್ಲಾ ದ್ವಾರಗಳನ್ನೂ ತೆರೆಯಲಿಲ್ಲ.
ಕೇವಲ ಎರಡು ದ್ವಾರಗಳನ್ನು ಮಾತ್ರ ತೆರೆಯಲಾಗಿತ್ತು. ಪೊಲೀಸ್ ಅಧಿಕಾರಿಗಳೂ ಎಲ್ಲ ದ್ವಾರಗಳನ್ನು ತೆರೆಯುವಂತೆ ಸೂಚಿಸಲಿಲ್ಲ. ಇದರ ಪರಿಣಾಮವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳ ಜಮಾವಣೆಯಾಗಿ ನೂಕು ನುಗ್ಗಲು ಉಂಟಾಗಿ 11 ಜನರು ಸಾವಿಗೀಡಾದರು ಎಂದು ಹೇಳಿದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಪೊಲೀಸ್ ಇಲಾಖೆ ಮತ್ತು ಕ್ರೀಡಾಂಗಣ ಆಡಳಿತ ಮಂಡಳಿಯ ವೈಫಲ್ಯವನ್ನು ಮರೆಮಾಚಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ತಲೆಗೆ ಕಟ್ಟುವ ಮುಖಾಂತರ ಅವರನ್ನು ಖಳನಾಯಕರಂತೆ ಬಿಂಬಿಸುತ್ತಿರುವುದು ಸರಿಯಲ್ಲ ಎಂದರು. ಕಾಂಗ್ರೆಸ್ ಮುಖಂಡರಾದ ಸೈಯದ್ ಫರೂಖ್, ಎಸ್.ಎ.ರಹೀಂ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.