Mysore
27
scattered clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ನಂದಿನಿ ತುಪ್ಪದ ಬ್ರ್ಯಾಂಡ್‌ ರಕ್ಷಣೆಗೆ ʼಕ್ಯೂಆರ್‌ʼ ಕೋಡ್‌

Nandini ghee

ಮೈಸೂರು : ಮಾರುಕಟ್ಟೆಯಲ್ಲಿ ನಂದಿನಿ ತುಪ್ಪದ ಬ್ರ್ಯಾಂಡ್‌ ರಕ್ಷಣೆಗೆ ಕರ್ನಾಟಕ ಹಾಲು ಮಹಾಮಂಡಳಿಯು ಕ್ಯೂ ಆರ್‌ ಕೋಡ್‌ ಇರುವ ನಂದಿನಿ ತುಪ್ಪ ಪ್ಯಾಕೆಟ್‌ನ್ನು ಪರಿಚಯಿಸಿದೆ.

ನಂದಿನಿ ಬ್ರಾಂಡ್‌ನ ನೂತನ ವಿನ್ಯಾಸದ ೫೦೦ ಎಂಎಲ್ ಹಾಗೂ ೧ ಲೀ ತುಪ್ಪದ ಪ್ಯಾಕೆಟ್‌ನ್ನು ಗುರುವಾರ ಕರ್ನಾಟಕ ಹಾಲು ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿ ಬಿಡುಗಡೆ ಮಾಡಿದರು.

ಗುರುವಾರ ನಗರದ ಸಿದ್ದಾರ್ಥನಗರದಲ್ಲಿರುವ ಮೈಸೂರು ಜಿಲ್ಲಾ ಹಾಲು ಒಕ್ಕೂಟ ಸಹಕಾರ ಸಂಘಗಳ ಕಛೇರಿ ಆವರಣದಲ್ಲಿ ನಡೆದ ಸರಳ ಸಮಾರಂಭದ ನಂತರ ಮಾತನಾಡಿದ ಅವರು, ನಂದಿನಿ ತುಪ್ಪಕ್ಕೆ ಬಹಳ ಬೇಡಿಕೆ ಇದೆ. ಹೀಗಾಗಿ ನಕಲು ಆಗುವ ಸಾಧ್ಯತೆ ಕೂಡ ಇದೆ. ಆದ್ದರಿಂದ ನೂತನ ನಂದಿನಿ ತುಪ್ಪದ ಪ್ಯಾಕೆಟ್‌ನ ಮೇಲೆ ಹಾಲೋಗ್ರಾಮ್ ಮುದ್ರಿಸಲಾಗಿದ್ದು ಮಾರುಕಟ್ಟೆಗೆ ಪರಿಚಯಿಸಲಾಗಿದೆ ಎಂದರು.

ಕ್ಯೂ ಆರ್‌ ಕೋಡ್‌ ಸ್ಕ್ಯಾನ್‌ ಮಾಡಿದರೆ ಸಿಗುತ್ತೆ ಮಾಹಿತಿ:- ಇದರಿಂದ ತುಪ್ಪವನ್ನು ನಕಲು ಮಾಡಲು ಅವಕಾಶವಿರುವುದಿಲ್ಲ. ತುಪ್ಪದ ಪ್ಯಾಕೆಟ್‌ನಲ್ಲಿನ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದರೆ ತುಪ್ಪದ ಪ್ಯಾಕೆಟ್ ಬ್ಯಾಚ್ ನಂಬರ್, ತಯಾರಿಸಿದ ದಿನಾಂಕ ಹಾಗೂ ಯಾವ ದಿನಾಂಕದವರೆಗೆ ಬಳಸಬಹುದು ಎಂಬುದರ ಮಾಹಿತಿ ಸಿಗಲಿದೆ ಎಂದರು.

೫೦೦ ಎಂ.ಎಲ್ ಮತ್ತು ೧ ಲೀ ಪ್ಯಾಕೆಟ್‌ನ್ನು ನವೀಕರಿಸಿ ಬಿಡುಗಡೆ ಮಾಡಿದ್ದು, ತುಪ್ಪದ ಗುಣಮಟ್ಟ ಮತ್ತು ಬೆಲೆಯಲ್ಲಿ ಯಾವುದೇ ರೀತಿಯ ಬದಲಾವಣೆಯಾಗಿರುವುದಿಲ್ಲ. ಎಂದಿನಂತೆ ಅದೆ ಸ್ವಾದ ಹಾಗೂ ಪೌಷ್ಟಿಕಯುಕ್ತ ತುಪ್ಪವನ್ನು ಗ್ರಾಹಕರು ಸವಿಯಬಹುದಾಗಿರುತ್ತದೆ ಎಂದು ಹೇಳಿದರು.

೩ ಸಾವಿರ ಮೆಟ್ರಿಕ್ ಟನ್:- ಹಾಲು ಒಕ್ಕೂಟದ ಎಲ್ಲಾ ಮಂಡಳಗಳ ಮೂಲಕ ಪ್ರತೀ ದಿನ ೩ ಸಾವಿರ ಮೆಟ್ರಿಕ್ ಟನ್ ತುಪ್ಪವನ್ನು ಪ್ರತಿದಿನ ಉತ್ಪಾದಿಸಲಾಗುತ್ತಿದೆ. ಹೆಚ್ಚು ಬೇಡಿಕೆ ಇರುವ ಕಾರಣ ಅಷ್ಟೂ ತುಪ್ಪ ಮಾರಾಟವಾಗುತ್ತಿದೆ ಎಂದರು.

ತಿರುಪತಿಗೆ ತುಪ್ಪ:- ತಿರುಪತಿಯಲ್ಲಿ ಲಡ್ಡು ಹಾಗೂ ಇನ್ನಿತರ ತಿನಿಸುಗಳ ತಯಾರಿಕೆಗೆ ನಂದಿನಿ ತುಪ್ಪವನ್ನು ಬಳಸಲಾಗುತ್ತಿದೆ. ಇದೀಗ ತಿರುಪತಿಗೆ ೩ ಸಾವಿರ ಮೆಟ್ರಿಕ್ ಟನ್ ತುಪ್ಪ ಸರಬರಾಜಿಗೆ ಬೇಡಿಕೆ ಬಂದಿದೆ. ೨ ಸಾವಿರ ಮೆಟ್ರಿಕ್ ಟನ್ ತುಪ್ಪವನ್ನು ಸರಬರಾಜು ಮಾಡಲಾಗಿದೆ ಎಂದರು.

ಮುಜರಾಯಿ ಇಲಾಖೆಗೆ ಸರಬರಾಜು:- ರಾಜ್ಯದ ಪ್ರಮುಖ ದೇವಾಯಗಳಲ್ಲಿ ಪ್ರಸಾದ ತಯಾರಿಕೆಗೆ ನಂದಿನಿ ತುಪ್ಪವನ್ನು ಬಳಸಬೇಕು ಎಂಬ ಸರ್ಕಾರದ ಆದೇಶ ಪಾಲನೆಯಾಗುತ್ತಿದೆ. ಬಹುತೇಕ ಎಲ್ಲಾ ದೇವಾಲಯಗಳಿಗೆ ತುಪ್ಪ ಸರಬರಾಜು ಮಾಡಲಾಗುತ್ತಿದೆ ಎಂದರು.

ವಿದೇಶಕ್ಕೂ ತುಪ್ಪ:- ಕೇರಳ, ತಮಿಳುನಾಡು, ದಿಲ್ಲಿ ಸೇರಿದಂತೆ ಸಾಕಷ್ಟು ರಾಜ್ಯಗಳಿಗೆ ನಂದಿನಿ ಉತ್ಪನ್ನಗಳನ್ನು ಸರಬರಾಜು ಮಾಡಲಾಗುತ್ತಿದೆ. ಇದರ ಜೊತೆಗೆ ದುಬೈ, ಆಸ್ಟ್ರೇಲಿಯ, ಕೆನಡ ಸೇರಿದಂತೆ ೭ ರಾಷ್ಟ್ರಗಳಿಗೆ ನಂದಿನಿ ತುಪ್ಪ ಹಾಗೂ ಉತ್ಪನ್ನಗಳನ್ನು ಕಳುಹಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಕಹಾಮದ ಮಾರುಕಟ್ಟೆ ನಿರ್ದೇಶಕರುಗಳು ಹಾಗೂ ಮೈಸೂರು ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎನ್.ಸುರೇಶ್ ನಾಯ್ಕ ಹಾಗೂ ಹಿರಿಯ ನಿರ್ದೇಶಕರುಗಳು ಮತ್ತು ಎಲ್ಲಾ ಹಾಲು ಒಕ್ಕೂಟಗಳ ವ್ಯವಸ್ಥಾಪಕ ನಿರ್ದೇಶಕರುಗಳು ಉಪಸ್ಥಿತರಿದ್ದರು.

Tags:
error: Content is protected !!