ಮೈಸೂರು: ಕೂರ್ಗಳ್ಳಿ ಗ್ರಾಮದ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷರನ್ನಾಗಿ ಗ್ರಾಮಸ್ಥರು ಒಟ್ಟಾಗಿ ಸೇರಿ ಪುಟ್ಟ ಸೋಮಾಚಾರಿ ಎಂಬುವರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ.
ಕೂರ್ಗಳ್ಳಿ ಗ್ರಾಮದ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ, ಕಾರ್ಯದರ್ಶಿ ಮತ್ತು ನಿರ್ದೇಶಕ ಸ್ಥಾನಕ್ಕಾಗಿ ನಡೆದ ಚುನಾವಣೆಗೆ ಸ್ಥಳೀಯ ಹಾಲು ಒಕ್ಕೂಟದ ಷೇರುದಾರರಿಂದಲೇ ಆಕ್ಷೇಪ ಕೇಳಿ ಬಂದಿತ್ತು.
ಚುನಾವಣೆಯು ಕ್ರಮವಾಗಿ ನಡೆದಿಲ್ಲ. ನೀತಿ ನಿಬಂಧನೆಗಳನ್ನು ಗಾಳಿಗೆ ತೂರಿ ಚುನಾವಣೆ ನಡೆಸಲಾಗುತ್ತಿದೆ ಎಂದು ಅಲ್ಲಿನ ಷೇರುದಾರರು ಆರೋಪಿಸಿದ್ದರು.
ಕಳೆದ 23 ವರ್ಷಗಳಿಂದ ನಮ್ಮ ಗ್ರಾಮದಲ್ಲಿ ಅಧ್ಯಕ್ಷರಾಗಿ ನಾಗೇಂದ್ರ ಮತ್ತು ಕಾರ್ಯದರ್ಶಿಯಾಗಿ ಸೀತಾರಾಮ್ ಅವರೇ ಮುಂದುವರಿದುಕೊಂಡು ಬಂದಿದ್ದಾರೆ ಎಂದು ಆಕ್ಷೇಪಿಸಿದ್ದರು.
ಈ ಹಿನ್ನೆಲೆಯಲ್ಲಿ ಷೇರುದಾರರೆಲ್ಲಾ ಕೂಡಿ ಕೂರ್ಗಳ್ಳಿ ಗ್ರಾಮದ ಪುಟ್ಟ ಸೋಮಾಚಾರಿ ಅವರನ್ನು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ.
ಇಲ್ಲಿ ಹಾಲು ಒಕ್ಕೂಟಕ್ಕೆ ಸರಬರಾಜು ಮಾಡುತ್ತಿರುವ ಪ್ರಾಮಾಣಿಕ ಜನರು ಕೇವಲ 52 ಜನರಷ್ಟೇ. ಆದರೆ ಅಕ್ರಮವಾಗಿ 284 ಸದಸ್ಯರನ್ನು ಮಾಡಿಕೊಂಡು ಚುನಾವಣೆ ನಡೆಸಿ ಜನತೆಗೆ ದ್ರೋಹ ಬಗೆಯಲಾಗಿದೆ.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಮೌನಕ್ಕೆ ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.
ಇದರಿಂದ ನೊಂದ ಗ್ರಾಮಸ್ಥರು ಹಾಗೂ ರೈತ ಮುಖಂಡರು ಮತ್ತೆ ಒಂದು ವಾರದ ಗಡುವು ನೀಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಈ ಕೂಡಲೇ ಚುನಾವಣೆ ಸಂಬಂಧ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ರಾಜೇಂದ್ರ, ವಾಸುಲಿಂಗೇಗೌಡ, ಪುಟ್ಟಣ್ಣ, ಪಟೇಲ್ ರಾಮಣ್ಣ, ಎನ್ ಕೃಷ್ಣಪ್ಪ, ಸಿದ್ದೇಗೌಡ, ಡಿ ರಾಮು, ಪಿಚ್ಛೆ ಗೌಡ್ರು ಕರಿಯಪ್ಪ, ಪಿಂಗಿ ರಾಮಣ್ಣ, ಅಂಕೆ ಗೌಡ ಅಣ್ಣಯ್ಯ, ಅಂಕೆಗೌಡ ರಾಮಪ್ಪ, ದೊಡ್ಡಟ್ಟಿ ಕೃಷ್ಣಪ್ಪ, ದೊಡ್ಡಟ್ಟಿ ನಾಗರಾಜ, ದೊಡ್ಡರವಿಕುಮಾರ್, ಮಹೇಶ್ ರಾಮಪ್ಪ, ಪುಟ್ಟಣ್ಣ, ಶಿವಪಾದು, ರವಿಕುಮಾರ್, ಪಿ, ಧನು, ಅಭಿ, ವಸಂತ್ ಕುಮಾರ್, ಬೈರೇಶ್, ಪ್ರಸನ್ನ, ಮಹಾಲಿಂಗಪ್ಪ, ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ಮುಖಂಡ ಲೋಕೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.