ಮೈಸೂರು : ಜಿಲ್ಲೆಯಲ್ಲಿ 2023 ಜೂನ್ 11ರಿಂದ 2025ರ ಜೂ.30ರವರೆಗೆ 31.04 ಕೋಟಿ ಮಹಿಳೆಯರು ಶಕ್ತಿಯೋಜನೆಯಡಿ ಉಚಿತವಾಗಿ ಪ್ರಯಾಣಿಸಿದ್ದಾರೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಹೇಳಿದರು.
ಶಕ್ತಿ ಯೋಜನೆಯ ಫಲಾನುಭವಿಗಳ ಸಂಖ್ಯೆ 500 ಕೋಟಿ ದಾಟಿದ ಹಿನ್ನೆಲೆಯಲ್ಲಿ ನಗರದ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಪ್ರಯಾಣಿಕರಿಗೆ ಸಿಹಿ ವಿತರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾಂಗ್ರೆಸ್ ಐತಿಹಾಸಿಕ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿಯೋಜನೆಯಡಿ ಕರ್ನಾಟಕದಲ್ಲಿ 500 ಕೋಟಿ ಮಹಿಳೆಯರು ಉಚಿತ ಸಂಚಾರ ಮಾಡಿದ್ದಾರೆ. ಮಹಿಳಾ ಸಬಲೀಕರಣ ಮತ್ತು ಸಾರಿಗೆ ನಿಗಮದ ಅಭಿವೃದ್ಧಿಗೂ ಶಕ್ತಿಯೋಜನೆ ಸಹಕಾರಿಯಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ 500 ಕೋಟಿ ಟಿಕೆಟ್ ಅನ್ನು ನೀಡುವ ಮುಖಾಂತರ ಸಂಭ್ರಮಾಚರಣೆ ಮಾಡಿದ್ದಾರೆ. ಮೈಸೂರಿನಲ್ಲಿ ಅಲಂಕೃತ ಬಸ್ಸಿನಲ್ಲಿ ಪಯಣಿಸುವ ಮುಖೇನ ಸಂಭ್ರಮಾಚರಣೆ ಮಾಡಿದ್ದೇವೆ. ಕೋಟ್ಯಂತರ ಮಹಿಳೆಯರು ಈ ಯೋಜನೆ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ಹೇಳಿದರು.
ಶಕ್ತಿ ಯೋಜನೆ ಪ್ರಾರಂಭವಾದ ನಂತರ ಜಿಲ್ಲೆಯಲ್ಲಿ 46.67 ಕೋಟಿ ಪ್ರಯಾಣಿಕರು ಪಯಣಿಸಿದ್ದಾರೆ. 31.04 ಕೋಟಿ ಮಹಿಳೆಯರು ಪ್ರಯಾಣಿಕರಿದ್ದಾರೆ. ನಿಗಮಕ್ಕೆ 776.48 ಕೋಟಿ ರೂ. ಆದಾಯ ಬಂದಿದೆ ಎಂದು ಮಾಹಿತಿ ನೀಡಿದರು.
ಸಂಭ್ರಮಾಚರಣೆಯ ಭಾಗವಾಗಿ ಅಲಂಕೃತ ಬಸ್ಸಿನಲ್ಲಿ ಗ್ರಾಮಾಂತರ ಬಸ್ ನಿಲ್ದಾಣದಿಂದ ಅಶೋಕ ರಸ್ತೆ ಮಾರ್ಗವಾಗಿ ನಗರ ಬಸ್ ನಿಲ್ದಾಣದ ತನಕ ಪಯಣಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಯುಕೇಶ್ ಕುಮಾರ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅರುಣ್‌ಕುಮಾರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಹರೀಶ್, ಕಾಂಗ್ರೆಸ್ ಮುಖಂಡರಾದ ಪುಷ್ಪಾಲತಾ ಚಿಕ್ಕಣ್ಣ, ಮೋದಾಮಣಿ, ಪುಷ್ಪಾವಲ್ಲಿ, ಮೋಹನ್ ಕುಮಾರಿ ಮುಂತಾದವರಿದ್ದರು.





