Mysore
34
scattered clouds

Social Media

ಗುರುವಾರ, 27 ಮಾರ್ಚ್ 2025
Light
Dark

ʻಗ್ಯಾರಂಟಿʼಯಿಂದ ಕೊಳ್ಳುವ ಶಕ್ತಿ ಹೆಚ್ಚಳ ; ಪುಷ್ಪ ಅಮರನಾಥ್‌

ಮೈಸೂರು: ಗ್ಯಾರಂಟಿ ಯೋಜನೆಗಳು ಯಾವುದೇ ಧರ್ಮ, ಜಾತಿ ಮತ್ತು ಪಕ್ಷಕ್ಕೆ ಸೀಮಿತವಾಗಿಲ್ಲ. ಗ್ಯಾರಂಟಿ ಯೋಜನೆಗಳಿಂದ ಜನರ  ಕೊಳ್ಳುವ ಶಕ್ತಿ ಹೆಚ್ಚಿದೆ. ಬಡತನ ನಿರ್ಮೂಲನೆಯಾಗುತ್ತಿದೆ. ಇದರಿಂದ ಬಿಜೆಪಿ ಮತ್ತು ಜಾ.ದಳ ನಾಯಕರು ಭಯಭೀತರಾಗಿದ್ದಾರೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಡಾ.ಪುಷ್ಪಾ ಅಮರನಾಥ್ ತಿಳಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚ ಗ್ಯಾರಂಟಿಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಮತ್ತು ಮೇಲ್ವಿಚಾರಣೆ ಮಾಡಲು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರವನ್ನು ಜಾರಿಗೆ ತರಲಾಗಿದೆ. ಈ ಸಮಿತಿ ಯನ್ನು ರದ್ದು ಮಾಡುವುದಿಲ್ಲ ಎಂದು ಹೇಳಿದರು.

ಬಡವರು, ಮಹಿಳೆಯರು ನೆಮ್ಮದಿಯ ಬದುಕನ್ನು ಸಾಗಿಸಲು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ವಿಪಕ್ಷ ನಾಯಕರ ನಿದ್ದೆಗೆಡಿಸಿವೆ. ಹೊಟ್ಟೆ ಕಿಚ್ಚಿನಿಂದ ವಿರೋಧ ಪಕ್ಷಗಳವರು ವಿರೋಧ ಮಾಡುತ್ತಿದ್ದಾರೆ.  ಮಹಾರಾಷ್ಟ್ರದಲ್ಲಿ ಸಂಘ ಪರಿವಾರ ಮತ್ತು ಬಿಜೆಪಿ ಕಾರ್ಯಕರ್ತರನ್ನು ನೇಮಿಸಿಕೊಂಡಿಲ್ಲವೇ? ಎಂದು ಪ್ರಶ್ನಿಸಿದರು.

ಗ್ಯಾರಂಟಿ ಸಮಿತಿ ರದ್ದುಪಡಿಸುವಂತೆ ಸದನದಲ್ಲಿ ಗದ್ದಲ ನಡೆಸುತ್ತಿರುವ ಬಿಜೆಪಿ ನಾಯಕರು ರಾಜ್ಯಪಾಲರಿಗೆ ದೂರು ಕೊಟ್ಟಿದ್ದಾರೆ. ಮೊದಲಿನಿಂದಲೂ ನಿರಂತರವಾಗಿ ಟೀಕೆ ಮಾಡುತ್ತಲೇ ಇದ್ದಾರೆ. ಆದರೆ, ನಮ್ಮ ಸರ್ಕಾರದಲ್ಲಿ ಆರಂಭವಾಗಿರುವ ಯಾವುದೇ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ. ಸಮಿತಿಯಲ್ಲೂ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.

೫೧ ಸಾವಿರ ಕೋಟಿ ರೂ. ಮೊತ್ತದ ಬೃಹತ್ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ರಾಜ್ಯ ಮತ್ತು ಜಿಲ್ಲಾಮಟ್ಟದಲ್ಲಿ ಉಸ್ತುವಾರಿ ಮಾಡಲು, ಅರ್ಹರು, ಅನರ್ಹರನ್ನು ಪರಿಶೀಲಿಸಲು, ಯಾವುದೇ ಫಲಾನುಭವಿ ಯೋಜನೆಯಿಂದ ವಂಚಿತರಾಗಬಾರದೆಂಬ ಕಾರಣಕ್ಕೆ ಸಮಿತಿ ಇದೆ. ಇದನ್ನೇಕೆ ವಿರೋಧಿಸಬೇಕು ಎಂದು ಪ್ರಶ್ನಿಸಿದರು.

ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾಯಿತ ಪ್ರತಿನಿಧಿಗಳಿಲ್ಲದೇ ಜನರ ಕಷ್ಟ ಕೇಳುವವರು ಇಲ್ಲವಾಗಿದ್ದಾರೆ. ಗ್ಯಾರಂಟಿ ಸಮಿತಿ ಸದಸ್ಯರು ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ. ಯಾವುದೇ ಆಸೆ- ಆಮಿಷ ಇಲ್ಲದೇ ಕೆಲಸ ಮಾಡುತ್ತಿದ್ದಾರೆ. ಇದನ್ನು ರಾಜಕೀಯ ಕಾರಣಕ್ಕಾಗಿ ವಿರೋಧಿಸುವುದು ಸರಿಯಲ್ಲ ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಸ್.ಅರುಣ್ ಕುಮಾರ್, ಉಪಾಧ್ಯಕ್ಷರಾದ ಪ್ರೊ.ಶಿವಕುಮಾರ್, ಚಂದ್ರಶೇಖರ್, ಬಸವಣ್ಣ, ಲತಾ ಹಾಜರಿದ್ದರು.

Tags: