ಎಚ್.ಡಿ.ಕೋಟೆ: ಆಸ್ತಿಗಾಗಿ ಸಂಬಂಧಿಕರಿಂದ ಗಲಾಟೆ ನಡೆದಿರುವ ಘಟನೆ ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕಿನ ಕ್ಯಾತನಹಳ್ಳಿ ಗೇಟ್‌ನಲ್ಲಿ ನಡೆದಿದೆ.
ಯೋಗಮಣಿ ಎಂಬುವವರ ಮೇಲೆ ಸಂಬಂಧಿಕರೇ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದ್ದು, ಗಲಾಟೆ ವಿಡಿಯೋ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.
2.5 ಎಕರೆ ಜಮೀನು ಯೋಗಮಣಿ ಪತಿ ರಾಜೇಶ್ ಎಂಬುವವರಿಗೆ ಸೇರಿತ್ತು. ಆದರೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ರಾಜೇಶ್ ಕಳೆದ 11 ದಿನದ ಹಿಂದೆ ಮೃತಪಟ್ಟಿದ್ದರು.
ರಾಜೇಶ್ ಸಾವನ್ನಪ್ಪಿದ ಬೆನ್ನಲ್ಲೇ ಸಂಬಂಧಿಕರಾದ ಮಹದೇವಮ್ಮ, ಸೋಮ ಹಾಗೂ ಸೌಮ್ಯ ಎಂಬುವವರು ಆಸ್ತಿಗಾಗಿ ಗಲಾಟೆ ಮಾಡಿದ್ದಾರೆ. ರಾಜೇಶ್ ಅಜ್ಜಿ ನಿಂಗಮ್ಮ, ಯೋಗಮಣಿ, ಮಗ ಚಂದು ಹಾಗೂ ಮಗಳು ಕೋಮಲ ಎಂಬುವವರ ಮೇಲೆ ಮಾರಕಾಸ್ತ್ರಗಳನ್ನು ತಂದು ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.
ಘಟನೆಯಲ್ಲಿ ಯೋಗಮಣಿ ಅವರ ಕೈ ಮುರಿದಿದ್ದು, ಮಗ ಚಂದುಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಈ ಸಂಬಂಧ ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





