Mysore
18
overcast clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ದುಷ್ಟಶಕ್ತಿಗೆ ಪ್ರಿಯಾಂಕ ಖರ್ಗೆ ಜಗ್ಗಲ್ಲ ; ನಾವು ಬಗ್ಗಲ್ಲ : ಸಿಎಂ ಎಚ್ಚರಿಕೆ

ಮೈಸೂರು : ಸರ್ಕಾರಿ ಜಾಗದಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಡೆಸುವುದನ್ನು ನಿಷೇಧ ಮಾಡಿರುವ ತಮಿಳುನಾಡು ಸರ್ಕಾರ ಹೊರಡಿಸಿರುವ ಆದೇಶದ ಸಂಪೂರ್ಣ ವರದಿಯನ್ನು ತರಿಸಿಕೊಳ್ಳಲಾಗುತ್ತಿದ್ದು, ಪರಿಶೀಲಿಸಿದ ಬಳಿಕ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮೈಸೂರು ವಿಮಾನ ನಿಲ್ದಾಣದಲ್ಲಿ ಬುಧವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಮಾತನಾಡಿ, ದುಷ್ಟಶಕ್ತಿಗಳು ಸಚಿವ ಪ್ರಿಯಾಂಕ ಖರ್ಗೆಗೆ ಬೆದರಿಕೆ ಹಾಕುತ್ತಿವೆ. ಅಂತಹ ಬೆದರಿಕೆಗಳಿಗೆ ಅವರು ಜಗ್ಗುವುದಿಲ್ಲ. ನಾವು ಬಗ್ಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಪ್ರಿಯಾಂಕ ಖರ್ಗೆ ಪತ್ರ ಬರೆದಿರುವುದರಲ್ಲಿ ತಪ್ಪೇನಿದೆ ಹೇಳಬೇಕು. ತಮಿಳುನಾಡಿನ ಸರ್ಕಾರಿ ಜಾಗದಲ್ಲಿ ಆರ್‌ಎಸ್ ಎಸ್ ಚಟುವಟಿಕೆ ನಡೆಸುವುದನ್ನು ನಿಷೇಧ ಮಾಡಲಾಗಿದೆ. ಅದನ್ನು ಕರ್ನಾಟಕದಲ್ಲಿ ಜಾರಿಗೆ ತನ್ನಿ ಎನ್ನುವಂತೆ ಹೇಳಿದ್ದಾರೆ. ಈ ಪತ್ರವನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದೇವೆ. ತಮಿಳುನಾಡು ರಾಜ್ಯದಿಂದ ಆ ಆದೇಶದ ಸಂಪೂರ್ಣ ವರದಿಯನ್ನು ತರಿಸಿಕೊಂಡು ಪರಿಶೀಲಿಸುತ್ತೇವೆ. ಸರ್ಕಾರದ ಮುಖ್ಯಕಾರ್ಯದರ್ಶಿಗೂ ಇದನ್ನು ಗಮನಿಸುವಂತೆ ಹೇಳಿದ್ದೇನೆ. ಅದರ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಬಿಜೆಪಿ ನಾಯಕರು ಯಾವಾಗಲೂ ದಮ್ಮಿದ್ದರೆ ಬ್ಯಾನ್ ಮಾಡಿ ,ದಮ್ಮಿದ್ದರೇ ಬನ್ನಿ ಎಂದು ಕರೆಯುತ್ತಾರೆ. ಕಳೆದ ಚುನಾವಣೆಯಲ್ಲಿ ಆ ರೀತಿ ಕರೆದಿದ್ದರು. ಅವರ ಸ್ಥಿತಿ ಏನಾಯಿತು ಎಂಬುದು ಗೊತ್ತಲ್ಲ ಎಂದು ಟೀಕಿಸಿದರು.

ಇದನ್ನು ಓದಿ: ಆರ್‌ಎಸ್‌ಎಸ್‌ ಬ್ಯಾನ್‌ ಅಂತಾ ನಾನು ಹೇಳಿಲ್ಲ: ಸಚಿವ ಪ್ರಿಯಾಂಕ್‌ ಖರ್ಗೆ ಸ್ಪಷ್ಟನೆ

ಸಾಮಾಜಿಕ,ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ರಾಜ್ಯದಲ್ಲಿ ನಡೆಯುತ್ತಿದೆ. ಬೆಂಗಳೂರು ನಗರ ಬಿಟ್ಟರೆ ಬೇರೆಲ್ಲೂ ಸಮೀಕ್ಷೆಗೆ ಹಿನ್ನಡೆಯಾಗಿಲ್ಲ. ಹೀಗಾಗಿ, ಸಮೀಕ್ಷೆ ದಿನಾಂಕವನ್ನು ಮತ್ತೆ ವಿಸ್ತರಣೆ ಮಾಡುವುದಿಲ್ಲ ಎಂದರು. ರಾಜ್ಯದ ಜನರ ಸ್ಥಿತಿಗತಿಯನ್ನು ಅರಿಯಲು ಸಮೀಕ್ಷೆ ಮಾಡಿಸಲಾಗುತ್ತಿದೆ. ಇದರಲ್ಲಿ ಯಾವ ರಾಜಕೀಯನೂ ಇಲ್ಲ ಎಂದರು. ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳಿಗೂ ಅನುದಾನ ಹಂಚಿಕೆ ಮಾಡಲಾಗುತ್ತಿದೆ. ಬಿಜೆಪಿ-ಜಾ.ದಳ ಅಧಿಕಾರದಲ್ಲಿದ್ದಾಗ ನಮ್ಮ ಶಾಸಕರಿಗೆ ಏನು ಮಾಡಿದರು ಎಂಬುದು ಗೊತ್ತಿದೆ. ಕಾಂಗ್ರೆಸ್ ಶಾಸಕರಿಗೆ ಕೊಡುವ ಅನುದಾನದಲ್ಲಿ ಭಾರೀ ತಾರತಮ್ಯ ಮಾಡಿದರು. ಅದನ್ನು ನಮ್ಮ ಸರ್ಕಾರದಲ್ಲಿ ಪುನರಾವರ್ತನೆ ಮಾಡುವುದಿಲ್ಲ. ನಾವು ಎಲ್ಲರಿಗೂ ಸಮಾನವಾಗಿ ಅನುದಾನ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು.

ಮೈಸೂರಿನಲ್ಲಿ ನಡೆದ ಬಾಲಕಿ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದಿದ್ದೇನೆ. ಕೊಲೆಯಾದ ಬಾಲಕಿ ಕುಟುಂಬಕ್ಕೆ ಪರಿಹಾರ ಕೊಡುವ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಕೆ.ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಡಾ.ಯತೀಂದ್ರ ಸಿದ್ದರಾಮಯ್ಯ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಽಕಾರದ ಅಧ್ಯಕ್ಷ ಅಯೂಬ್ ಖಾನ್, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಡಾ.ಪುಷ್ಪ ಅಮರನಾಥ್,ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್,ನಗರಾಧ್ಯಕ್ಷ ಆರ್.ಮೂರ್ತಿ ಮತ್ತಿತರರು ಹಾಜರಿದ್ದರು.

Tags:
error: Content is protected !!