ಮೈಸೂರು : ಜಾತಿ ನಿಂದನೆ, ಅಸ್ಪೃಶ್ಯತೆ ಆಚರಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರು ದಾಖಲು ಹಾಗೂ ತನಿಖೆ ನಡೆಸುವ ಉದ್ದೇಶದಿಂದ ಆರಂಭಗೊಂಡಿರುವ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ನೂತನ ಜಿಲ್ಲಾ ಠಾಣೆ ಕಚೇರಿಯನ್ನು ದಕ್ಷಿಣ ವಲಯ ಐಜಿಪಿ ಡಾ.ಎಂ.ಬಿ.ಬೋರಲಿಂಗಯ್ಯ ಉದ್ಘಾಟಿಸಿದರು.
ನಗರದ ಜಯಚಾಮರಾಜೇಂದ್ರ ವೃತ್ತದ ಬಳಿಯ ಬಿಎಸ್‌ಎನ್‌ಎಲ್ ಕಚೇರಿ ಆವರಣದಲ್ಲಿ ಆರಂಭವಾಗಿರುವ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ದೌರ್ಜನ್ಯಕ್ಕೆ ಒಳಗಾದವರಿಗೆ ನ್ಯಾಯ ಸಿಗಬೇಕು, ತನಿಖೆಯು ಗುಣಮಟ್ಟದಿಂದ ಕೂಡಿರಬೇಕು ಹಾಗೂ ಅಪರಾಧಿಗಳಿಗೆ ಶಿಕ್ಷೆ ಶೀಘ್ರವಾಗಿ ಆಗಬೇಕು ಎಂಬ ಉದ್ದೇಶದಿಂದ ನಾಗರಿಕ ಜಾರಿ ನಿರ್ದೇಶನಾಲಯದ ಠಾಣೆಗಳನ್ನು ಸರ್ಕಾರ ಆರಂಭಿಸಿದೆ ಎಂದರು.
ಇದನ್ನು ಓದಿ:ಕೆಪಿಎ-ಮಹಿಳಾ-ಮಕ್ಕಳ ಅಭಿವೃದ್ಧಿ ಸಂಸ್ಥೆ ನಡುವೆ ಒಡಂಬಡಿಕೆ
ಯಾವುದೇ ದೌರ್ಜನ್ಯ ಹಾಗೂ ಜಾತಿನಿಂದನೆ ಪ್ರಕರಣಗಳು ಇದ್ದಲ್ಲಿ ನೊಂದವರು ನೇರವಾಗಿ ಈ ಕಚೇರಿಗೆ ಬಂದು ದೂರು ಸಲ್ಲಿಸಬಹುದು. ಇದರ ಜೊತೆಗೆ ಸ್ಥಳೀಯ ಠಾಣೆಗಳಲ್ಲಿಯೂ ದೂರು ದಾಖಲಿಸಬಹುದು. ನಂತರ ದೂರು ಇಲ್ಲಿಗೆ ವರ್ಗಾವಣೆಗೊಂಡು ತನಿಖೆ ಇಲ್ಲಿಯೇ ನಡೆಯಲಿದೆ ಎಂದು ತಿಳಿಸಿದರು.
ಎಸ್‌ಸಿ, ಎಸ್‌ಟಿ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಸ್ಥಳೀಯ ಠಾಣೆಗಳಲ್ಲಿ ದೂರು ದಾಖಲಿಸಬಹುದು. ಆದರೆ, ಇತರೆ ಪ್ರಕರಣಗಳ ನಡುವೆ ಈ ಪ್ರಕರಣಗಳ ತನಿಖೆ ನಡೆಸಿದಲ್ಲಿ ತನಿಖೆಯು ಗುಣಮಟ್ಟದಿಂದ ನಡೆಯಲು ಕಷ್ಟವಾಗುತ್ತದೆ. ಹೀಗಾಗಿ ಪ್ರತ್ಯೇಕ ಠಾಣೆಯನ್ನು ಆರಂಭಿಸಲಾಗಿದೆ. ಇದರಿಂದ ಆರೋಪಿತರಿಗೆ ಗರಿಷ್ಠ ಶಿಕ್ಷೆ ಆಗುವಂತೆ ತನಿಖೆ ನಡೆಸಲಾಗುತ್ತದೆ ಎಂದು ವಿವರಿಸಿದರು.
ಮೈಸೂರು, ಕೊಡಗು, ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಗಳಲ್ಲಿ ದಾಖಲಾದ ಪ್ರಕರಣಗಳ ತನಿಖೆ ಪ್ರಭಾರ ಎಸ್‌ಪಿ ಎಲ್.ನಾಗೇಶ್ ಅವರ ನೇತೃತ್ವದಲ್ಲಿ ನಡೆಯಲಿದೆ. ಮೈಸೂರು ಜಿಲ್ಲೆಯ ಪ್ರಕರಣಗಳು ಡಿವೈಎಸ್‌ಪಿ ಅನುಷಾ ರಾಣಿ ಅವರ ನೇತೃತ್ವದಲ್ಲಿ ತನಿಖೆ ನಡೆಯಲಿದೆ. ಪ್ರಸ್ತುತ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಜಿಲ್ಲಾ ಠಾಣೆಯಲ್ಲಿ ಡಿವೈಎಸ್‌ಪಿ ಸೇರಿದಂತೆ 12 ಮಂದಿ ಕಾರ್ಯ ನಿರ್ವಹಿಸಲಿದ್ದಾರೆ. ಎಸ್‌ಸಿ, ಎಸ್‌ಟಿ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಯಾವ ಸಮಯದಲ್ಲಿ ಬೇಕಾದರೂ ಈ ಠಾಣೆಯಲ್ಲಿ ದೂರು ಸಲ್ಲಿಸಬಹುದು.




