Mysore
26
clear sky

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಮೈಸೂರು ಕಾರಂಜಿ ಕೆರೆಯಲ್ಲಿ ಪೆಂಗ್ವಿನ್ ಪಾರ್ಕ್: ಈಶ್ವರ ಖಂಡ್ರೆ

Penguin Park at Mysore Karanji Lake Eshwara Khandre

ಬೆಂಗಳೂರು : ಮೈಸೂರು ಮೃಗಾಲಯಕ್ಕೆ ಹೊಂದಿಕೊಂಡಿರುವ ಕಾರಂಜಿ ಕೆರೆಯಲ್ಲಿ ಮತ್ಸ್ಯಾಗಾರದ ಬದಲಿಗೆ ಪೆಂಗ್ವಿನ್ ಪಾರ್ಕ್ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ವಿಕಾಸಸೌಧದಲ್ಲಿಂದು ನಡೆದ ಕರ್ನಾಟಕ ಮೃಗಾಲಯ ಪ್ರಾಧಿಕಾರದ 159ನೇ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಮತ್ಸ್ಯಾಗಾರದ ಕಟ್ಟಡದಲ್ಲಿ ಪೆಂಗ್ವಿನ್ ಧಾಮ ಮಾಡುವುದು ಸೂಕ್ತವೆಂದು ತಜ್ಞರು ಅಭಿಪ್ರಾಯಪಟ್ಟಿರುವ ಹಿನ್ನೆಲೆಯಲ್ಲಿ ಕೂಡಲೇ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.

ಹೆಚ್ಚು ಆಕರ್ಷಕಗೊಳಿಸಲು ಸೂಚನೆ: ಮೃಗಾಲಯಗಳಲ್ಲಿ ಆಧುನಿಕ ಸೌಲಭ್ಯ ಕಲ್ಪಿಸಿದರೆ, ಹೊಸ ವನ್ಯಜೀವಿಗಳು ಸೇರ್ಪಡೆಯಾದರೆ ಪ್ರವಾಸಿಗರಿಗೆ ಹೆಚ್ಚಿನ ಆಕರ್ಷಣೆ ಇರುತ್ತದೆ. ಈ ನಿಟ್ಟಿನಲ್ಲಿ ವಿದೇಶಿ ಮೃಗಾಲಯಗಳೊಂದಿಗೆ ವಿನಿಮಯ ಕಾರ್ಯಕ್ರಮಕ್ಕೆ ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಮುಂದಿನ 5 ವರ್ಷಗಳಲ್ಲಿ ಆಯಾ ಮೃಗಾಲಯಗಳು ತಮ್ಮ ಖರ್ಚು, ವೆಚ್ಚವನ್ನು ತಾವೇ ನಿರ್ವಹಿಸಲು ಶಕ್ತವಾಗುವಂತೆ ಮತ್ತು ಆರ್ಥಿಕ ಸ್ವಾವಲಂಬನೆ ಸಾಧಿಸಲು ಅನುವಾಗುವಂತೆ ಯೋಜನೆ ರೂಪಿಸಲು ತಿಳಿಸಿದರು.

ಗಣಿ ಬಾಧಿತ ಜಿಲ್ಲೆಗಳಲ್ಲಿರುವ ಮೃಗಾಲಯಗಳ ಅಭಿವೃದ್ಧಿಗೆ ಕೆ.ಎಂ.ಇ.ಆರ್.ಸಿ. ನಿಧಿಯನ್ನು ಬಳಕೆ ಮಾಡಿಕೊಳ್ಳುವಂತೆ ತಿಳಿಸಿದ ಅವರು, ದಾವಣಗೆರೆಯ ಮೃಗಾಲಯ ಅಭಿವೃದ್ಧಿಗೆ 2 ಕೋಟಿ ರೂ. ಬಿಡುಗಡೆಗೆ ಅನುಮೋದನೆ ನೀಡಿದರು.

ಬೀದರ್ ನಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಪಕ್ಷಿಧಾಮ: ಬೀದರ್ ನಲ್ಲಿ ವಿದೇಶೀ ಹಕ್ಕಿ, ಪಕ್ಷಿಗಳ ವಿಶಿಷ್ಟವಾದ ಪಕ್ಷಿಲೋಕವನ್ನು ನಿರ್ಮಿಸಲು ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುವಂತೆ ತಿಳಿಸಿದ ಸಚಿವರು, ಈ ಯೋಜನೆಗೆ 20 ಕೋಟಿ ರೂ.ಗಳನ್ನು ಹಂಚಿಕೆ ಮಾಡಲು ಸೂಚಿಸಿದರು.

Tags:
error: Content is protected !!