ಎಚ್.ಡಿ.ಕೋಟೆ: ತಾಲ್ಲೂಕಿನ ತಾರಕ ಜಲಾಶಯದಿಂದ ಅಪಾರ ಪ್ರಮಾಣದ ನೀರನ್ನು ಹೊರ ಬಿಟ್ಟಿರುವ ಹಿನ್ನೆಲೆಯಲ್ಲಿ ನದಿ ಪಾತ್ರದ ಜನರು ನೆರೆ ಭೀತಿಯಲ್ಲಿದ್ದಾರೆ.
ಕಳೆದ ಕೆಲ ದಿನಗಳಿಂದ ಧಾರಾಕಾರ ಮಳೆಯಾಗುತ್ತಿರುವ ಪರಿಣಾಮ ಎಚ್.ಡಿ.ಕೋಟೆ ತಾಲ್ಲೂಕಿನ ತಾರಕ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಅಪಾರ ಪ್ರಮಾಣದ ನೀರನ್ನು ಹೊರ ಬಿಡಲಾಗಿದೆ.
ಈ ಹಿನ್ನೆಲೆಯಲ್ಲಿ ಎಚ್.ಡಿ.ಕೋಟೆ- ಕಟ್ಟೆಮನುಗನಹಳ್ಳಿ ಸಂಪರ್ಕ ರಸ್ತೆ ಸಂಪೂರ್ಣ ಜಲಾವೃತವಾಗಿದ್ದು, ಜನರು ಪರದಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಟ್ಟೆಮನುಗನಹಳ್ಳಿ, ಮೊತ್ತ, ಆಲತ್ತಾಳಹುಂಡಿ, ಮೊತ್ತಹಾಡಿ ಸಂಪರ್ಕ ಕಡಿತವಾಗಿದ್ದು, ಅಂತರಸಂತೆ ಮಾರ್ಗದಲ್ಲಿ ಬಳಸಿ ಬರಬೇಕಾದ ಅನಿವಾರ್ಯತೆ ಎದುರಾಗಿದೆ.
ಬಹು ವರ್ಷಗಳ ಬಳಿಕ ತಾರಕ ಜಲಾಶಯ ತುಂಬಿ ಹರಿಯುತ್ತಿದ್ದು, ನದಿ ಪಾತ್ರದ ಜನ ನೆರೆ ಭೀತಿಯಲ್ಲಿದ್ದಾರೆ. ನದಿಯ ಪ್ರವಾಹಕ್ಕೆ ಸಿಲುಕಿ ಭಾರಿ ಗಾತ್ರದ ಮರದ ದಿಮ್ಮಿಗಳು ಕೊಚ್ಚಿಹೋಗುತ್ತಿದ್ದು, ಹಲವು ಜಮೀನುಗಳು ಜಲಾವೃತವಾಗಿವೆ.





