ಮೈಸೂರು : ಬೇರೊಂದು ಕಟ್ಟಡಕ್ಕೆ ತಮ್ಮನ್ನು ಸ್ಥಳಾಂತರಿಸುವುದನ್ನು ವಿರೋಧಿಸಿ ಮಹಾಜನ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿಗಳೆಲ್ಲರೂ ಕಾಲೇಜು ಆವರಣದಲ್ಲಿ ಜಮಾವಣೆಗೊಂಡು ಕಾಲೇಜು ಆಡಳಿತ ಮಂಡಳಿಯ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಾಲೇಜಿನಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಗುಣಮಟ್ಟದ ಶಿಕ್ಷಣ ನೀಡುತ್ತಿಲ್ಲ. ಯಾವುದೋ ಉದ್ದೇಶದಿಂದ ನಮ್ಮನ್ನು ಕೆಆರ್‌ಎಸ್ ರಸ್ತೆಯ ಕಟ್ಟಡಕ್ಕೆ ವರ್ಗಾವಣೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿದರು.
ಸುತ್ತಮುತ್ತಲ ಬಡಾವಣೆಗಳಿಂದ ವಿದ್ಯಾರ್ಥಿಗಳು ಕಾಲೇಜಿಗೆ ಆಗಮಿಸುತ್ತಾರೆ. ಹೊರಗಿನಿಂದ ಬಂದವರು ಕಾಲೇಜು ಆಸುಪಾಸಿನಲ್ಲಿ ಬಾಡಿಗೆ ಕೊಠಡಿ ಮಾಡಿಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಹೀಗಿರುವಾಗ ಏಕಾಏಕಿ ನಗರದ ಹೊರವಲಯದಲ್ಲಿನ ಕಟ್ಟಡಕ್ಕೆ ಕಾಲೇಜು ವರ್ಗಾವಣೆ ಮಾಡಲು ಮುಂದಾಗಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಕಾಲೇಜಿನಲ್ಲಿ ಒಂದೊಂದು ವಿದ್ಯಾರ್ಥಿಯಿಂದ ಒಂದೊಂದು ರೀತಿಯ ಶುಲ್ಕ ಪಡೆಯಲಾಗಿದೆ. ಪಾಠ ಮಾಡುವಾಗ ಕನ್ನಡದಲ್ಲಿಯೂ ಅರ್ಥ ಹೇಳಿ ಎಂದರೆ ಹೇಳುವುದಿಲ್ಲ. ಶೈಕ್ಷಣಿಕ ಪ್ರಗತಿಯ ದೃಷ್ಟಿಯಿಂದ ಯಾವುದೇ ಸುಧಾರಣೆ ಮಾಡುತ್ತಿಲ್ಲ. ಈ ಎಲ್ಲ ಬೆಳವಣಿಗೆಗಳು ವಿದ್ಯಾರ್ಥಿಗಳ ಕಲಿಕೆಯ ಮೇಲೆ ಕಟ್ಟ ಪರಿಣಾಮ ಉಂಟು ಮಾಡುತ್ತಿದೆ ಎಂದು ದೂರಿದರು.
ಇದೇ ವೇಳೆ ಕಾಲೇಜಿನ ವಿದ್ಯಾರ್ಥಿಗಳು ಒಟ್ಟಾಗಿ ಪ್ರಾಂಶುಪಾಲರ ಬಳಿಗೆ ತೆರಳಿ ತಮ್ಮ ಅಹವಾಲನ್ನು ಹೇಳಿಕೊಂಡರು. ಅಲ್ಲದೇ ಅವುಗಳನ್ನು ಕೂಡಲೇ ಬಗೆಹರಿಸಬೇಕು ಎಂದು ಒತ್ತಾಯಿಸಿದರು.





