Mysore
32
broken clouds

Social Media

ಭಾನುವಾರ, 27 ಸೆಪ್ಟೆಂಬರ್ 2026
Light
Dark

ರಾಜ್ಯದಲ್ಲಿ ಸದ್ಯಕ್ಕೆ ಲೋಡ್‌ ಶೆಡ್ಡಿಂಗ್‌ ಪ್ರಶ್ನೆ ಇಲ್ಲ: ಸಚಿವ ಕೆ.ಜೆ.ಜಾರ್ಜ್

ಮೈಸೂರು: ವಿದ್ಯುತ್‌ ಕೊರತೆ ಹಾಗೂ ರಾಜ್ಯದ ವಿದ್ಯುತ್‌ ಪರಿಸ್ಥಿತಿ ಕುರಿತು ಮಾತನಾಡಿರುವ ಸಚಿವ ಕೆ.ಜೆ.ಜಾರ್ಜ್‌ ರಾಜ್ಯದಲ್ಲಿ ಸದ್ಯಕ್ಕೆ ಲೋಡ್‌ ಶೆಡ್ಡಿಂಗ್‌ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸದ್ಯಕ್ಕೆ ಲೋಡ್‌ ಶೆಡ್ಡಿಂಗ್‌ ಪ್ರಶ್ನೆಯೇ ಇಲ್ಲ. ಸುಮಾರು ಒಂದು ಸಾವಿರ ಮೆಗಾವ್ಯಾಟ್‌ ವಿದ್ಯುತ್‌ ಕೊರತೆ ಇದೆ. ಕಳೆದ ಏಳು ತಿಂಗಳಿಂದ ವಿದ್ಯುತ್‌ ಕೊರತೆ ಎದುರಾಗಿದೆ. ಬೇರೆ ಬೇರೆ ರಾಜ್ಯಗಳಿಂದ ವಿದ್ಯುತ್‌ ಖರೀದಿಸಿ ಹೇಗೋ ಮ್ಯಾನೇಜ್‌ ಮಾಡುತ್ತಿದ್ದೇವೆ. ದುಡ್ಡು ಕೊಟ್ಟರೂ ಬೇರೆ ರಾಜ್ಯಗಳಿಂದ ಕೇಳಿದಷ್ಟು ವಿದ್ಯುತ್‌ ಸಿಗುತ್ತಿಲ್ಲ. ದೇಶಾದ್ಯಂತ ಇದೇ ಸಮಸ್ಯೆ ಇದೆ ಎಂದು ಹೇಳಿದ್ದಾರೆ.

ಸದ್ಯಕ್ಕೆ ನಾವು ಹೇಗೋ ಮ್ಯಾನೇಜ್‌ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಕೈಮೀರಿದರೆ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ತೀರ್ಮಾನ ಮಾಡುತ್ತೇವೆ. ಈಗ ಎಲ್ಲೂ ಲೋಡ್‌ ಶೆಡ್ಡಿಂಗ್‌ ಮಾಡುತ್ತಿಲ್ಲ. ಒಂದು ವಾರದ ಹಿಂದೆ ಸ್ವಲ್ಪ ಸಮಸ್ಯೆಯಾದ ಕಾರಣ ಒಂದೆರೆಡು ದಿನ ಸಮಸ್ಯೆಯಾಗಿತ್ತು. ಕೃಷಿ ಹಾಗೂ ಮನೆ ಬಳಕೆಗೆ ವಿದ್ಯುತ್‌ ನೀಡುತ್ತಿದ್ದೇವೆ. ಬೇರೆ ರಾಜ್ಯಗಳಿಂದ ವಿದ್ಯುತ್‌ ಖರೀದಿ ಪ್ರಕ್ರಿಯೆ ನಿರಂತರವಾಗಿ ಸಾಗಿದೆ. ಉತ್ಪಾದನಾ ಘಟಕಗಳನ್ನು ಹೆಚ್ಚಿಸುವ ಪ್ರಕ್ರಿಯೆಯೂ ಜಾರಿಯಲ್ಲಿದೆ. ದಸರಾಗೆ ಯಾವುದೇ ವಿದ್ಯುತ್‌ ಕೊರತೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅಧಿಕಾರಿ ನಾಪತ್ತೆ ವಿಚಾರಕ್ಕೂ ಪ್ರತಿಕ್ರಿಯೆ:

ಎಇಇ ನಾಪತ್ತೆ ಪ್ರಕರಣದ ಬಗ್ಗೆ ಮಾತನಾಡಿದ ಸಚಿವ ಕೆ.ಜೆ. ಜಾರ್ಜ್‌, ಮಾಧ್ಯಮಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನನಗೆ ಹಿಂದಿನ ಗಣಪತಿ ಆತ್ಮಹತ್ಯೆ ಪ್ರಕರಣದ ಅನುಭವ ಇದೆ. ಆಗಲೂ ಮಾಧ್ಯಮಗಳು ನನ್ನ ಮೇಲೆ ಬಿದ್ದಿದ್ದವು. ಒಂದು ವಿಡಿಯೋ ಹಿಡಿದುಕೊಂಡು ತಿಂಗಳುಗಟ್ಟಲೆ ವರದಿ ಮಾಡಿದ್ದವು. ಸತ್ಯ ಏನೆಂಬುದು ನಂತರ ಗೊತ್ತಾಯಿತು. ಈಗ ಎಇಇ ಪ್ರಕರಣವೂ ಅಷ್ಟೇ ಎಂದು ಹೇಳಿದ್ದಾರೆ.

ಸರ್ಕಾರ ಅನುದಾನ ಕೊಡಲಿಲ್ಲ ಎಂದು ಚೀಟಿ ಬರೆದಿಟ್ಟು ಕಣ್ಮರೆಯಾಗಿರುವುದನ್ನು ಹೇಗೆ ನಂಬುತ್ತೀರಾ? ಎಇಇಗೆ ಅಂತಹ ಒತ್ತಡ ಏನಿರುತ್ತದೆ? ಅನುದಾನದ ಒತ್ತಡ ಅವರ ಮೇಲೆ ಯಾಕೆ ಬರಬೇಕು? ಅವರೇನು ಆರ್ಥಿಕ ಇಲಾಖೆ ಅಧಿಕಾರಿನಾ? ಈ ಪ್ರಕರಣದಲ್ಲಿ ಎಲ್ಲಿಂದ ಎಲ್ಲಿಗೆ ಸಂಬಂಧಗಳು ಕಾಣುತ್ತಿವೆ ಹೇಳಿ. ಸರ್ಕಾರ ಅವರಿಗೆ ಒತ್ತಡ ತೆಗೆದುಕೊಳ್ಳಿ ಎಂದು ಹೇಳಿತ್ತಾ? ಸುಮ್ಮನೆ ಇದನ್ನು ದೊಡ್ಡದು ಮಾಡಿಕೊಂಡು ಕೂರಬೇಡಿ ಎಂದು ಹೇಳಿದ್ದಾರೆ.

ನಾನು ಆ ಇಲಾಖೆಯ ಸಚಿವನಲ್ಲ. ಆ ಇಲಾಖೆಯ ಸಚಿವರು ಈ ಬಗ್ಗೆ ಮಾತನಾಡುತ್ತಾರೆ. ನನಗೆ ನನ್ನದೇ ಆದ ಅನುಭವ ಆದ ಕಾರಣ ಈಗ ಈ ಪ್ರಕರಣದ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಸಿದ್ದರಾಮಯ್ಯ ಮೌನದ ಬಗ್ಗೆ ಜಾರ್ಜ್‌ ಹೇಳಿದ್ದೇನು?:

ಮಾಜಿ ಸಿಎಂ ಸಿದ್ದರಾಮಯ್ಯ ದೊಡ್ಡ ನಾಯಕರು. ಅವರು ಯಾವಾಗ ಮಾತನಾಡಬೇಕೋ ಆಗ ಮಾತನಾಡುತ್ತಾರೆ. ಅವರು ಮೌನವಾಗಿದ್ದಾರೆ ಎಂದು ನಿಮಗೆ ಹೇಳಿದವರು ಯಾರು? ಸಮಯ, ಸಂದರ್ಭ ಬಂದಾಗ ಅವರು ಮಾತನಾಡುತ್ತಾರೆ ಎಂದು ಕೆ.ಜೆ. ಜಾರ್ಜ್‌ ಹೇಳಿದ್ದಾರೆ.

ಸಿದ್ದರಾಮಯ್ಯ ಜೊತೆಗೆ ಅವರ ಎಲ್ಲಾ ಸ್ನೇಹಿತರು ಚೆನ್ನಾಗಿಯೇ ಇದ್ದಾರೆ. ಮೊನ್ನೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲೂ ಎಲ್ಲರೂ ಜೊತೆಯಲ್ಲಿದ್ದರು. ನಾವು ಕಾಂಗ್ರೆಸ್‌ನವರು ಒಂದೇ ಕುಟುಂಬದವರ ರೀತಿ ಇದ್ದೇವೆ.

ನಾನು ಸಿದ್ದರಾಮಯ್ಯ ಅವರಿಗೆ ಮಾತ್ರ ಆತ್ಮೀಯನಲ್ಲ. ಇವತ್ತಿನ ಸಿಎಂ ಅವರಿಗೂ ಆತ್ಮೀಯನೇ. ಹಿಂದೆ ಇದ್ದ ಎಲ್ಲಾ ಸಿಎಂಗಳಿಗೂ ನಾನು ಆತ್ಮೀಯ. ನಾನು ಎಲ್ಲರ ಜೊತೆಯಲ್ಲೂ ಚೆನ್ನಾಗಿಯೇ ಇದ್ದೇನೆ ಎಂದು ಮೈಸೂರಿನಲ್ಲಿ ಸಚಿವ ಕೆ.ಜೆ. ಜಾರ್ಜ್‌ ಹೇಳಿದ್ದಾರೆ.

Tags:
error: Content is protected !!