ಮೈಸೂರು : ನಗರದಲ್ಲಿ ಯುನಿಟಿ ಮಾಲ್ ನಿರ್ಮಿಸಲು ನಮ್ಮ ವಿರೋಧ ಇಲ್ಲ. ಆದರೆ, ಸರ್ಕಾರ ಗೊಂದಲವಿಲ್ಲದ ಸ್ಥಳ ನೀಡದೆ ದಿಕ್ಕು ತಪ್ಪಿಸುವ ಕೆಲಸ ಮಾಡಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.
ಮೈಸೂರು ಯುನಿಟಿ ಮಾಲ್ ನಿರ್ಮಾಣಕ್ಕೆ ಹೈಕೋರ್ಟ್ ತಡೆ ಕುರಿತು ಮಾತನಾಡಿದ ಅವರು, ಯುನಿಟಿ ಮಾಲ್ ಸ್ಥಳ ನಾನು ಉದ್ಘಾಟಿಸಿರಲಿಲ್ಲ. ಆ ಸ್ಥಳಕ್ಕೆ ನಾನು ಗುದ್ದಲಿ ಪೂಜೆಯನ್ನೂ ಮಾಡಿರಲಿಲ್ಲ. ನಾನು ಆ ಸ್ಥಳದ ಕಾಮಗಾರಿ ಪರಿಶೀಲನೆ ಮಾಡಿದ್ದಷ್ಟೆ. ಕೇಂದ್ರ ಸರ್ಕಾರದ ಯೋಜನೆಗೆ ರಾಜ್ಯಸರ್ಕಾರ ಯಾವುದೇ ಗೊಂದಲವಿಲ್ಲದ ಸ್ಥಳ ನೀಡಬೇಕು. ಆದರೆ, ಸರ್ಕಾರ ದಿಕ್ಕು ತಪ್ಪಿಸುವ ಕೆಲಸ ಮಾಡಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಮೋದಾದೇವಿ ಒಡೆಯರ್ ಸ್ಪಷ್ಟಪಡಿಸಿದ್ದಾರೆ. ಈ ವಿಚಾರ ಸದ್ಯ ನ್ಯಾಯಾಲಯದಲ್ಲಿದೆ. ಈ ಹಂತದಲ್ಲಿ ಇದರ ಬಗ್ಗೆ ಹೆಚ್ಚು ಮಾತನಾಡಲ್ಲ ಎಂದರು.
ಸರ್ಕಾರ ಹಣದ ಪರಿಹಾರ ನೀಡಿ ಬಿಕ್ಕಟ್ಟು ನಿವಾರಿಸಿದರೆ ಒಪ್ಪಿಗೆ ಇದೆಯಾ ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಂಸದ ಯದುವೀರ್, ಈ ಕುರಿತು ಜನಪ್ರತಿನಿಧಿಯಾಗಿ ಪ್ರಮೋದಾದೇವಿ ಅವರ ಜತೆ ಮಾತನಾಡಿರುವೆ. ಮುಂದಿನ ಹಂತದಲ್ಲಿ ಇದರ ಬಗ್ಗೆ ಮತ್ತಷ್ಟು ಚರ್ಚಿಸಿ ಕ್ರಮಕೈಗೊಳ್ಳಲಾಗುವುದು. ಮಾಲ್ ನಿರ್ಮಾಣಕ್ಕೆ ಸೂಕ್ತ ಸ್ಥಳ ನೀಡದೆ ಗೊಂದಲ ಮಾಡಿರುವ ರಾಜ್ಯಸರ್ಕಾರವನ್ನ ಪ್ರಶ್ನಿಸುವೆ. ಈ ರೀತಿಯ ಸರ್ಕಾರದ ಯೋಜನೆಗೆ ಖಾಸಗಿ ಜಮೀನು ನೀಡಲೇಬಾರದು. ಆದರೆ, ಈ ರೀತಿ ರಾಜ್ಯ ಸರ್ಕಾರ ಮಾಡಿದ್ದು ಏಕೆ ಎಂಬುದು ಪ್ರಶ್ನೆ. ನಮ್ಮ ಹಾಗೂ ಅಮ್ಮನ ನಡುವೆ ಗೊಂದಲ ಇದೆಯಾ ಎಂಬುದೇ ಅಪ್ರಸ್ತುತ ವಿಚಾರವಾಗಿದೆ ಎಂದು ಹೇಳಿದರು.





