ಮೈಸೂರು : ಪಿಎಚ್.ಡಿ ಪದವಿ ಪ್ರವೇಶ ಪಡೆಯುವ ಆಕಾಂಕ್ಷಿಗಳಿಗೆ ಮಾರ್ಗದರ್ಶಕರ ಕೊರತೆಯಾಗಿದ್ದು, ಮಾರ್ಗದರ್ಶಕರಿಗಿರುವ ಸೀಮಿತಿ ಸಂಖ್ಯೆಯನ್ನು ಹೆಚ್ಚಿಸಬೇಕೆಂಬ ಬೇಡಿಕೆಗೆ ಒಪ್ಪಿಗೆ ನೀಡಲು ಮೈಸೂರು ವಿಶ್ವವಿದ್ಯಾನಿಲಯ ಸಮ್ಮತಿಸಿಲ್ಲ.
ಮೈಸೂರು ವಿವಿ ಕ್ರಾಫರ್ಡ್ ಭವನದಲ್ಲಿ ಮಂಗಳವಾರ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಿಂಡಿಕೇಟ್ ಸಭೆಯಲ್ಲಿ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಚಂದ್ರಶೇಖರ್ ಶೆಟ್ಟಿ ನೇತೃತ್ವದ ಸಮಿತಿ ವರದಿಯನ್ನು ಸಭೆಗೆ ಮಂಡಿಸಲಾಯಿತಾದರೂ ಯಾವುದೇ ಚರ್ಚೆ ಕೈಗೆತ್ತಿಕೊಳ್ಳಲಿಲ್ಲ. ಇದರಿಂದಾಗಿ ಹಲವು ದಿನಗಳಿಂದ ಮಾರ್ಗದರ್ಶಕರಿಗೆ ಇರುವ ನಿಗದಿತ ಮಂದಿಗೆ ಸೀಮಿತಗೊಳಿಸಿರುವ ಮಿತಿಯನ್ನು ಹೆಚ್ಚಿಸಬೇಕೆಂಬ ಪಿಎಚ್.ಡಿ ಪದವಿ ಆಕಾಂಕ್ಷಿಗಳ ಬೇಡಿಕೆಗೆ ತಣ್ಣೀರೆರಚಿದೆ.
ಪ್ರೊ.ಚಂದ್ರಶೇಖರ್ ಶೇಟ್ಟಿ ಸಮಿತಿಯ ಶಿಫರಸ್ಸಿನ ವಿಚಾರಗಳನ್ನು ಮುಂದಿನ ಸಭೆಯಲ್ಲಿ ವಿಸ್ತೃತವಾಗಿ ಚರ್ಚೆ ಮಾಡಿದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲು ಒಪ್ಪಿಗೆ ಸೂಚಿಸಲಾಯಿತು. ಮಾನಸಗಂಗೋತ್ರಿಯ ಜೈವಿಕ ತಂತ್ರಜ್ಞಾನ, ಸಂಖ್ಯಾಶಾಸ, ಭೂಗೋಳಶಾಸ, ಇತಿಹಾಸ ಅಧ್ಯಯನ, ಸಾರ್ವಜನಿಕ ಆಡಳಿತ ವಿಭಾಗಗಳ ಅಧ್ಯಕ್ಷರ ನೇಮಕಕ್ಕೆ ಒಪ್ಪಿಗೆ ನೀಡಲಾಯಿತು. ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದ ಸ್ಥಾಯಿ ಸಮಿತಿ ಶಿಫರಸ್ಸನ್ನು ಒಪ್ಪಿಕೊಂಡ ಸಭೆಯು, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಹೆಸರಿನಲ್ಲಿ ದತ್ತಿ ಸ್ಥಾಪನೆ, ಸಿ.ಎಂ.ನಾರಾಯಣಸ್ವಾಮಿ ಮತ್ತು ಬಿ.ಜೆ.ಶಾಂತಕುಮಾರಿ ದತ್ತಿ ಸ್ಥಾಪನೆಗೆ ಒಪ್ಪಿಗೆ ನೀಡಲಾಯಿತು.
ರಾಜ್ಯ ಗ್ರಂಥಾಲಯ ಪ್ರಾಧಿಕಾರಕ್ಕೆ ಮೈಸೂರು ವಿ.ವಿಯಿಂದ ಚಂದ್ರಶೇಖರ್ ಅವರನ್ನು ನಾಮ ನಿರ್ದೇಶನ ಮಾಡಲು ಸಮ್ಮತಿಸಲಾಯಿತು. ಮೈಸೂರು ವಿ.ವಿಯ ಡಾ.ಎಚ್. ರಾಜಶೇಖರ್ ಅವರ ವಿರುದ್ಧ ಕೇಳಿಬಂದಿರುವ ಆರೋಪದ ಬಗ್ಗೆ ಇಲಾಖಾ ವಿಚಾರಣೆ ನಡೆಸಲು ಒಪ್ಪಿಗೆ ನೀಡಲಾಯಿತು. ಗ್ರಂಥಾಲಯ ಮತ್ತು ಮಾಹಿತಿ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಶಾಲಿನಿ ಆರ್.ಅರಸು ಬೆಂಗಳೂರಿನ ವಿಜಿಎಸ್‌ಟಿ ವತಿಯಿಂದ ಸಂಶೋಧನೆ ನಡೆಸಲು ಪಡೆದಿದ್ದ ಸಂಶೋಧನಾ ಅನುದಾನಕ್ಕೆ ಬಡ್ಡಿ ಸಮೇತ ಹಿಂತಿರುಗಿಸುವುದಕ್ಕೆ ನೋಟಿಸ್ ನೀಡಲು ಸೂಚಿಸಲಾಯಿತು.
ಮಾನಸಗಂಗೋತ್ರಿಯ ಎಂಬಿಎ ವಿಭಾಗದಲ್ಲಿ ಇರುವ 180 ಸೀಟುಗಳಲ್ಲಿ 60 ಸೀಟುಗಳನ್ನು ಸ್ವಯಂ ಹಣಕಾಸು ನಿಧಿಯಡಿ ಪ್ರವೇಶಾತಿಮಾಡಿಕೊಳ್ಳಲು ತೀರ್ಮಾನಿಸಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದಿಂದ ಅನುಮೋದನೆ ದೊರೆತ ಮೇಲೆ 60 ಸೀಟುಗಳನ್ನು ಸ್ವಯಂ ಹಣಕಾಸು ನಿಧಿಯಡಿ ಪ್ರವೇಶ ಮಾಡಿಕೊಳ್ಳಲಾಗುತ್ತದೆ ಎಂದು ಹೇಳಲಾಗಿದೆ. 2025-26ನೇ ಸಾಲಿನ ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳಲ್ಲಿ ಸ್ನಾತಕೋತ್ತರ ಕೋರ್ಸ್ ತೆರೆಯಲು ಅನುಮೋದನೆ ನೀಡಲಾಯಿತು.
ಸಭೆಯಲ್ಲಿ ಕುಲಸಚಿವರಾದ ಎಂ.ಕೆ.ಸವಿತಾ, ಪರೀಕ್ಷಾಂಗ ಕುಲಸಚಿವ ಪ್ರೊ.ನಾಗರಾಜು, ಸಿಂಡಿಕೇಟ್ ಸದಸ್ಯರಾದ ಕ್ಯಾತನಹಳ್ಳಿ ನಾಗರಾಜು, ಡಾ.ನಟರಾಜು ಶಿವಣ್ಣ, ಗೋಕುಲ್ ಗೋವರ್ಧನ್, ಡಾ.ಶಿಲ್ಪಾ, ಪ್ರೊ.ಮುಸ್ತಫ, ಚಂದ್ರಶೇಖರ್, ಶಂಕರ್ ಮತ್ತಿತರರು ಹಾಜರಿದ್ದರು.





