ಮೈಸೂರು : ಮಂತ್ರಿಗಿರಿ, ಅಧಿಕಾರಕ್ಕಾಗಿ ಎಂದಿಗೂ ಯಾರನ್ನು ಕೇಳಿಕೊಂಡಿಲ್ಲ. ಅತ್ತು-ಕರೆದು ಅಧಿಕಾರ ಪಡೆದಿಲ್ಲ. ನನ್ನ-ಸಿದ್ದರಾಮಯ್ಯರ ನಡುವೆ ಯಾವ ವೈಮನಸ್ಸು ಇಲ್ಲ. ಸದಾ ನನ್ನೊಂದಿಗೆ ಇರುತ್ತಾರೆ,ಮುಂದೆಯೂ ಇರುತ್ತಾರೆ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವ ಸಂಪುಟದಲ್ಲಿ ಅವಕಾಶ ಸಿಗದಿದ್ದಕ್ಕೆ ನಿರಾಶೆಯಾಗುವ ಪ್ರಶ್ನೆಯೇ ಇಲ್ಲ. ಪೂರ್ಣ ಪ್ರಮಾಣದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗುವಾಗ ಸಿಗುವ ನಿರೀಕ್ಷೆ ಇದೆ. ಸಿಗುತ್ತದೆ ಎನ್ನುವ ವಿಶ್ವಾಸವನ್ನು ಇಟ್ಟುಕೊಂಡಿದ್ದೇವೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಹಾಗೂ ನನ್ನ ನಡುವೆ ಯಾವುದೇ ವೈಮನಸ್ಸು ಇಲ್ಲ. ಸದಾ ನನ್ನೊಂದಿಗೆ ಇದ್ದೇ ಇರುತ್ತಾರೆ. ನಮ್ಮ ಪರವಾಗಿಲ್ಲ ಎಂದು ಹೇಳಬಾರದು. ನನ್ನ ಪರವಾಗಿ ಬಲವಾಗಿ ವಾದ ಮಾಡಿಲ್ಲ ಎನ್ನುವುದು ಸರಿಯಲ್ಲ. ಡಾ.ಯತೀಂದ್ರ ಕೂಡ ನಮ್ಮ ಮಗನಿದ್ದಂತೆ. ನಾನು-ಸಿದ್ದರಾಮಯ್ಯ 40 ವರ್ಷಗಳ ಕಾಲ ಜತೆಯಾಗಿದ್ದಂತೆ ಡಾ.ಯತೀಂದ್ರ ಹಾಗೂ ಸುನಿಲ್ ಬೋಸ್ ಜತೆಯಾಗಿದ್ದಾರೆ. ನನ್ನ ಸಿದ್ಧಾಂತ, ಹೋರಾಟಗಳನ್ನು ಮುಂದುವರಿಸಿಕೊಂಡು ಹೋಗುವ ವಿಶ್ವಾಸ ಇದೆ ಎಂದರು.
ಕರ್ನಾಟಕದಲ್ಲಿ ದಲಿತ ನಾಯಕತ್ವದಲ್ಲಿ ಮುಂಚೂಣಿಯಲ್ಲಿರುವ ಡಾ.ಎಚ್.ಸಿ.ಮಹದೇವಪ್ಪರಿಗೆ ಸಚಿವ ಸ್ಥಾನ ಸಿಗಲಿಲ್ಲ ಎನ್ನುವ ಕಾರಣಕ್ಕಾಗಿ ಬೆಂಗಳೂರಿನಲ್ಲಿ ನಡೆದ ಹೋರಾಟ ಪಕ್ಷಾತೀತವಾಗಿ,ಜಾತ್ಯತೀತವಾಗಿತ್ತು. ಒಬ್ಬ ಹೋರಾಟಗಾರ,ಸೈದ್ಧಾಂತಿಕ ನಾಯಕನಿಗೆ ಅವಕಾಶ ಸಿಗದೆ ಇರುವ ಬಗ್ಗೆ ಸ್ವಾಭಾವಿಕವಾಗಿ ನಾಯಕರು ತಂತಮ್ಮ ಅಭಿಪ್ರಾಯಗಳನ್ನು ಹೇಳಿದ್ದಾರೆ. ಸಿದ್ದರಾಮಯ್ಯ ಅವರ ಮೇಲೆ ಯಾರು ಮನಸ್ತಾಪ ಇಟ್ಟುಕೊಂಡಿಲ್ಲ. ನಾಯಕರು ತಮ್ಮ ಜವಾಬ್ದಾರಿಗೆ ತಕ್ಕಂತೆ ಮಾತನಾಡಿದ್ದಾರೆ ಎಂದರು.
ಅಧಿಕಾರ,ಮಂತ್ರಿಗಿರಿಗಿಂತಲೂ ಇಂದು ಸಂವಿಧಾನ, ಪ್ರಜಾಪ್ರಭುತ್ವದ ರಕ್ಷಣೆಗೆ ಹೋರಾಟ ಮಾಡಬೇಕಾಗಿದೆ. ಸಂವಿಧಾನ ಸಂದಿಗ್ಧ ಸ್ಥಿತಿಯಲ್ಲಿ ಸಿಲುಕಿದೆ. ಎಸ್‌ಐಆರ್ ನೆಪದಲ್ಲಿ ಮತದಾರರ ಹಕ್ಕನ್ನು ಕಸಿಯುವ ಹುನ್ನಾರವನ್ನು ಕೇಂದ್ರದ ಬಿಜೆಪಿ ಸರ್ಕಾರ, ಕೇಂದ್ರ ಚುನಾವಣಾ ಆಯೋಗ ಮಾಡುತ್ತಿದೆ. ಪಶ್ಚಿಮಬಂಗಾಳ ನಂತರ ಕರ್ನಾಟಕದಲ್ಲೂ ಮತದಾರರ ಹಕ್ಕನ್ನು ಕಸಿಯುವ ಕೆಲಸಕ್ಕೆ ಕೈ ಹಾಕಿರುವುದರ ವಿರುದ್ದ ನಮ್ಮ ಹೋರಾಟವಿದೆ ಎಂದರು.
ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಮಾಡಲಿದೆ. ಸಂಪುಟಕ್ಕೆ ಸೇರುವ ಬಗ್ಗೆ ಯಾರ ಬಳಿಗೂ ಹೋಗಲ್ಲ ಎಂದು ಸಮರ್ಥಿಸಿಕೊಂಡರು. ಜಾ.ದಳ ರಚನೆಯಾದಾಗ ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ಧದ ರಾಜಕೀಯ ಸ್ಪಷ್ಟ ಸಿದ್ಧಾಂತವಾಗಿತ್ತು. ಆದರೆ,ಒಂದು ಬಾರಿ ಕಾಂಗ್ರೆಸ್‌ನೊಂದಿಗೆ, ಇನ್ನೊಂದು ಬಾರಿ ಬಿಜೆಪಿಯೊಂದಿಗೆ ಕೈ ಜೋಡಿಸಿ ಅಧಿಕಾರ ಮಾಡಿರುವ ಕಾರಣ ಯಾವ ತತ್ವ,ಸಿದ್ಧಾಂತ ಇಲ್ಲದಂತಾಗಿದೆ ಎಂದು ಟೀಕಿಸಿದರು.
ಮೊದಲನೇ ಹಂತದಲ್ಲಿ ಮಂತ್ರಿ ಸ್ಥಾನ ಸಿಗದಿದ್ದಕ್ಕೆ ಮೊದಲ ಸಾಲಿನಿಂದ ಎರಡನೇ ಸಾಲಿನ ನಾಯಕರ ಮಟ್ಟಕ್ಕೆ ಬಂದರೆಂದು ಹೇಳಲಾಗುತ್ತಿದೆಯಲ್ಲಾ ಎನ್ನುವ ಪ್ರಶ್ನೆಗೆ, ನಾನು ಸದಾ ಮೊದಲ ಸಾಲಿನಲ್ಲಿ ಇರುವವನು. ಎರಡನೇ ಸಾಲಿಗೆ ಬರುವ ಮಾತೇ ಇಲ್ಲ. ಸಂಪುಟಕ್ಕೆ ಸೇರದಿದ್ದಕ್ಕೆ ಎರಡನೇ ಸಾಲಿನ ನಾಯಕರಾಗಿ ಬಿಡುವುದಿಲ್ಲ ಎಂದರು.




