ಮೈಸೂರು : ಮೈಸೂರು ವಿಶ್ವವಿದ್ಯಾನಿಲಯದ ಕಾರ್ಯಸೌಧ ಕ್ರಾಫರ್ಡ್‌ಭವನದ ಪರೀಕ್ಷಾ ಭವನದಲ್ಲಿ ಗುರುವಾರ ವಿದ್ಯುತ್ ವ್ಯತ್ಯಯದಿಂದಾಗಿ ಮೊಬೈಲ್ ಫೋನ್ ಬೆಳಕಿನಲ್ಲಿಯೇ ಮೌಲ್ಯಮಾಪಕರು ಪದವಿ ಪರೀಕ್ಷೆಗಳ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ನಡೆಸಿದ ಸಂಗತಿ ಬಹಿರಂಗವಾಗಿದೆ.
ಕಲಾಮಂದಿರ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯವಾಗಲಿರುವ ಬಗ್ಗೆ ಮೂರು ದಿನಗಳ ಹಿಂದೆಯೇ ಸೆಸ್ಕ್ ನೀಡಿದ್ದ ಮಾಹಿತಿ ಪತ್ರಿಕೆಗಳಲ್ಲೂ ಪ್ರಕಟವಾಗಿತ್ತು. ಪೂರ್ವಸಿದ್ಧತೆಯನ್ನು ಮಾಡಿಕೊಳ್ಳದೆ ಮೈಸೂರು ವಿವಿ ನಿರ್ಲಕ್ಷ್ಯದಿಂದ ಮೌಲ್ಯಮಾಪಕರು ದಿನವಿಡೀ ಸಮಸ್ಯೆ ಎದುರಿಸುವಂತಾಯಿತು.
ಮೋಡವೂ ಕವಿದಿದ್ದರಿಂದ ಬೆಳಕಿರಲಿಲ್ಲ. ಕಿಟಕಿಗಳು ದೂರದಲ್ಲಿದ್ದವು. ವಯಸ್ಸಾದ ಪ್ರಾಧ್ಯಾಪಕರು ಮಂದ ಬೆಳಕಿನಲ್ಲಿ ಮೌಲ್ಯಮಾಪನ ಮಾಡುವಂತಾಯಿತು. ಬೆಳಕಿಲ್ಲದ ಕಾರಣ, ನಾಳೆ ಮೌಲ್ಯಮಾಪನ ಮಾಡುವುದಾಗಿ ಕೇಳಿಕೊಂಡರೂ ಅಧಿಕಾರಿಗಳು ಸ್ಪಂದಿಸಲಿಲ್ಲ. ಪರೀಕ್ಷಾಂಗ ವಿಭಾಗ ಪರ್ಯಾಯ ವ್ಯವಸ್ಥೆ ಮಾಡಿರಲಿಲ್ಲ. ಜನರೇಟರ್ ಕೆಟ್ಟಿದೆ ಡೀಸೆಲ್ ಹಾಕಲೂ ವಿವಿಯಲ್ಲಿ ಹಣವಿಲ್ಲ ಎಂದು ನಿರ್ಲಕ್ಷದ ಮಾತುಗಳಿಂದ ವಿಧಿಯಿಲ್ಲದೇ ಮೌಲ್ಯಮಾಪನ ಮಾಡುವಂತಾಯಿತು ಎಂದು ಮೌಲ್ಯಮಾಪಕರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.
ನಗರ ಪ್ರದೇಶದ ಕಾಯಂ ಅಧ್ಯಾಪಕರು ಮೌಲ್ಯಮಾಪನ ಕಾರ್ಯಕ್ಕೆ ಬರುತ್ತಿಲ್ಲ. ಗ್ರಾಮೀಣ ಪ್ರದೇಶದ ಕಾಯಂ ಪ್ರಾಧ್ಯಾಪಕರು ಹಾಗೂ ಅತಿಥಿ ಉಪನ್ಯಾಸಕರಿಂದಲೇ ಮೌಲ್ಯಮಾಪನ ಮಾಡಿಸಲಾಗುತ್ತಿದೆ. ಪ್ರತಿಯೊಬ್ಬ ಪ್ರಾಧ್ಯಾಪಕರು ಕಡ್ಡಾಯವಾಗಿ ಮೌಲ್ಯಮಾಪನದಲ್ಲಿ ಪಾಲ್ಗೊಳ್ಳಬೇಕೆಂಬ ಕ್ರಮಕ್ಕೂ ವಿವಿ ಮುಂದಾಗುತಿಲ್ಲ ಎಂದು ಅಧ್ಯಾಪಕರೊಬ್ಬರು ಆರೋಪಿಸಿದ್ದಾರೆ.





