ಮೈಸೂರು : ನಗರದ ಸೇಠ್ ಮೋಹನ್ ದಾಸ್ ತುಳಸಿದಾಸ್ ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರು ಸೋಮವಾರ ಭೇಟಿ ನೀಡಿ ಗರ್ಭಿಣಿ ಹಾಗೂ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದರು.
ಮಧ್ಯಾಹ್ನ 2 ಗಂಟೆಗೆ ಆಸ್ಪತ್ರೆಗೆ ಭೇಟಿ ನೀಡಿದ ನಾಗಲಕ್ಷ್ಮೀ ಚೌಧರಿ ಅವರು ಸುಮಾರು 2 ಗಂಟೆಗೂ ಹೆಚ್ಚು ಕಾಲ ಪರಿಶೀಲನೆ ನಡೆಸಿದರು. ಆಸ್ಪತ್ರೆಯಲ್ಲಿ ಸಿಗುತ್ತಿರುವ ಸೌಲಭ್ಯಗಳನ್ನು ಕಣ್ಣಾರೆ ಕಂಡು ಸಾರ್ವಜನಿಕರೊಂದಿಗೆ ಮಾತುಕತೆ ನಡೆಸಿದರು.
ಆಸ್ಪತ್ರೆ ಬಂದ ಗರ್ಭಿಣಿಯರು ಹಾಗೂ ಬಾಣಂತಿಯನ್ನು ಖುದ್ದು ಭೇಟಿಯಾಗಿ ಮಾತನಾಡಿದರು. ಆಸ್ಪತ್ರೆಯಲ್ಲಿ ಸರಿಯಾದ ಸೌಲಭ್ಯ ಸಿಗುತ್ತಿದೆಯೇ ವೈದ್ಯರು ಹಾಗೂ ಸಿಬ್ಬಂದಿ ನಿಮ್ಮೊಂದಿಗೆ ಹೇಗೆ ವರ್ತಿಸುತ್ತಾರೆ ಏನಾದರೂ ಕುಂದುಕೊರತೆ ಇದೆಯೇ ಎಂದು ಪ್ರಶ್ನಿಸಿದರು. ಈ ವೇಳೆ ಆಸ್ಪತ್ರೆಯಲ್ಲಿದ್ದ ಬಾಣಂತಿಯರ ಸಂಬಂಧಿಕರು ಸೌಲಭ್ಯ ಕೊರತೆಗಳ ಇರುವುದನ್ನು ನಾಗಲಕ್ಷ್ಮಿ ಚೌಧರಿ ಗಮನಕ್ಕೆ ತಂದರು. ಇನ್ನೂ ಕೆಲವರು ಆಸ್ಪತ್ರೆ ಸಿಬ್ಬಂದಿ, ವೈದ್ಯರು ಸರಿಯಾಗಿ ಸ್ಪಂದಿಸುವುದಿಲ್ಲ ಎಂದು ದೂರಿದರು.
ಇದೇ ವೇಳೆ ಮಾತನಾಡಿದ ಚೌಧರಿ, ಸರ್ಕಾರಿ ಆಸ್ಪತ್ರೆಗಳು ಜನಸ್ನೇಹಿಯಾಗಿರಬೇಕು. ನಿಮ್ಮನ್ನು ನಂಬಿ ಆಸ್ಪತ್ರೆಗೆ ಬರುತ್ತಾರೆ. ಅವರಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿ ಎಂದು ಕಿವಿಮಾತು ಹೇಳಿದರು.
ತೀವ್ರ ತೊಂದರೆಯಲ್ಲಿ ಬರುವ ಗರ್ಭಿಣಿ, ಬಾಣಂತಿಯರಿಗೆ ಮತ್ತು ಮಕ್ಕಳಿಗೆ ಗುಣಮಟ್ಟದ ಚಿಕಿತ್ಸೆ ಒದಗಿಸಬೇಕು. ಗರ್ಭಿಣಿ, ತಾಯಂದಿರಿಗೆ ಪ್ರೋತ್ಸಾಹಧನದ ಸೌಲಭ್ಯ ಕಲ್ಪಿಸಬೇಕು. ಆಸ್ಪತ್ರೆಯಲ್ಲಿನ ಕುಡಿಯುವ ನೀರಿನ ಹಾಗೂ ಶೌಚಾಲಯಗಳ ವ್ಯವಸ್ಥೆ ಸರಿಪಡಿಸುವಂತೆ ತಿಳಿಸಿದರು.
ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಸರ್ಕಾರಿ ಸೌಲಭ್ಯಗಳು ಸಮರ್ಪಕವಾಗಿ ಸಿಗಬೇಕು. ಅಂಗನವಾಡಿಯಲ್ಲಿ ಅಗತ್ಯ ಪರಿಕರಗಳನ್ನು ಸರಿಯಾದ ರೀತಿಯಲ್ಲಿ ವಿತರಿಸಬೇಕು ಎಂದು ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ವೈದ್ಯಕೀಯ ಸೇವೆ, ರೋಗಿಗಳಿಗೆ ನೀಡುತ್ತಿರುವ ಚಿಕಿತ್ಸೆ, ಕುಡಿಯುವ ನೀರು, ಶೌಚಾಲಯಗಳ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದ ಅವರು, ಯಾವುದೇ ರೀತಿಯ ಸೌಲಭ್ಯಗಳ ಕೊರತೆಯಾಗದಂತೆ ಎಚ್ಚರಿಕೆ ವಹಿಸಲು ಸೂಚಿಸಿದರು.
ವಿವಿಧ ವಾರ್ಡ್‌ಗಳಿಗೆ ಭೇಟಿ: ಆಸ್ಪತ್ರೆಯ ಪ್ರತಿ ವಿಭಾಗಕ್ಕೂ ಭೇಟಿ ನೀಡಿದ ನಾಗಲಕ್ಷ್ಮೀ ಚೌಧರಿ ಏನೆಲ್ಲಾ ಕೊರತೆಗಳಿವೆ? ಏನೆಲ್ಲಾ ಸೌಲಭ್ಯ ಸಿಗುತ್ತಿವೆ ಎಂಬುದರ ಮಾಹಿತಿ ಪಡೆದುಕೊಂಡರು. ಪ್ರಸೂತಿ ಹೊರರೋಗಿಗಳ ವಿಭಾಗ, ಪ್ರಸೂತಿ ಪರೀಕ್ಷೆ ಕೊಠಡಿ, ಔಷಧ ವಿತರಣಾ ವಿಭಾಗ, ನವಜಾತು ಶಿಶು ವಿಭಾಗ, ಅಪೌಷ್ಟಿಕ ಮಕ್ಕಳ ಕೇಂದ್ರಗಳಿಗೆ ಭೇಟಿ ನೀಡಿ ಚಿಕಿತ್ಸೆ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು.
ನಿಮ್ಮ ಮನೆಗೆ ಆಂದೋಲನದ ಆ ಪತ್ರಕೆ ತಲುಪಿಲ್ಲವೇ.. ಹಾಗಾದ್ರೆ E Paper ಓದಿ





