ಮೈಸೂರು: ತಂಗಿಯ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಸಾಮಗ್ರಿ ತರಲು ತೆರಳಿದ ಯುವಕ ರಸ್ತೆ ಕಾಮಗಾರಿ ನಡೆಯುತ್ತಿದ್ದ ಭಾರಿ ಹಳ್ಳಕ್ಕೆ ಬಿದ್ದು ಕೋಮಾ ಸ್ಥಿತಿಗೆ ತಲುಪಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹೆಡಿಯಾಲದ ವೀರಭದ್ರಸ್ವಾಮಿ ಘಟನೆಯಲ್ಲಿ ಗಾಯಗೊಂಡ ಯುವಕ. ತೀವ್ರ ಗಾಯಗೊಂಡಿರುವ ವೀರಭದ್ರಸ್ವಾಮಿಯನ್ನು ಜಿಲ್ಲೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ತಂಗಿ ನಿಶ್ಚಿತಾರ್ಥ ಹಿನ್ನಲೆ ಸಾಮಗ್ರಿ ತರಲು ಹುಲ್ಲಹಳ್ಳಿಗೆ ಹೋಗುವ ವೇಳೆ, ಮಾದಾಪುರ ಹಾಗೂ ಕಾರ್ಯ ಗ್ರಾಮದ ನಡುವಿನ ರಾಜ್ಯ ಹೆದ್ದಾರಿಯಲ್ಲಿ ಡೆಕ್ ಕಾಮಗಾರಿ ನಡೆಯುತ್ತಿದ್ದ ಹಳ್ಳಕ್ಕೆ ಉರುಳಿ ಬಿದ್ದು ಕೋಮಾ ಸ್ಥಿತಿ ತಲುಪಿದ್ದಾನೆ.
ಭಾರಿ ಪ್ರಮಾಣದ ಹಳ್ಳ ತೆಗೆಯುವ ವೇಳೆ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳದ ಕಾರಣ ಈ ಘಟನೆ ನಡೆದಿದೆ ಎಂದು ವೀರಭದ್ರಸ್ವಾಮಿ ತಂದೆ ಬಸವಲಿಂಗಪ್ಪರವರು ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಹಿನ್ನಲೆ ಕಾಮಗಾರಿ ನಡೆಸುವ ವೇಳೆ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದ ಗುತ್ತಿಗೆದಾರ ಗೋವಿಂದೇಗೌಡ ವಿರುದ್ದ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.