ಕೆ.ಆರ್.ನಗರ: ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮದ ವೇದಿಕೆಯ ಮೇಲೆ ಕಾರ್ಯಕರ್ತನಿಗೆ ಶಾಸಕ ರವಿಶಂಕರ್ ಕಪಾಳಮೋಕ್ಷ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ತಾಲ್ಲೂಕಿನ ದೊಡ್ಡೇಕೊಪ್ಪಲು ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ವೇದಿಕೆಯಲ್ಲೇ ಇದ್ದ ಕಾಂಗ್ರೆಸ್ ಮುಖಂಡ ಮಹದೇವು ಎಂಬುವವರು ಗ್ರಾಮಕ್ಕೆ ಡೈರಿ ಕಟ್ಟಡವನ್ನು ನಿರ್ಮಿಸಿಕೊಡುವಂತೆ ಶಾಸಕರ ಬಳಿ ಮನವಿ ಮಾಡಿದರು.
ಮನವಿಯಿಂದ ಕೆಂಡಾಮಂಡಲರಾದ ಶಾಸಕ ರವಿಶಂಕರ್ ಅವರು ಮಹದೇವು ಅವರ ಕಪಾಳಕ್ಕೆ ಹೊಡೆದಿದ್ದಾರೆ ಎನ್ನಲಾಗಿದೆ.
ಇದನ್ನು ಓದಿ: ದರೋಡೆ ಸ್ಕೆಚ್ ರೂಪಿಸಿ ಪತಿ ಮೇಲೆ ಪತ್ನಿ ಹಲ್ಲೆ : ಕೊನೆಗೂ ಸಾವಿಗೀಡಾದ ಪತಿ
ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಶಾಸಕ ರವಿಶಂಕರ್ ಅವರು, ಆತ ನನಗೆ ಪರಿಚಿತ ಡೈರಿ ವಿಚಾರವಾಗಿ ಕೇಳುತ್ತಿದ್ದ. ಈತನ ಜೊತೆಗೆ ಬೇರೆಯವರು ಮಾತನಾಡುತ್ತಿದ್ದರು. ಸರಿಯಾಗಿ ಯಾರಿಗೆ ಏನೂ ಕೇಳಿಸುತ್ತಿರಲಿಲ್ಲ. ಹೀಗಾಗಿ ಈ ಕಡೆ ಬಾ ಎಂದು ಬೆನ್ನಿಗೆ ತಟ್ಟಿ ಕರೆದೆ. ನಾನು ಯಾವುದೇ ಹಲ್ಲೆ ಮಾಡುವುದಾಗಲಿ, ಆತನಿಗೆ ಹೊಡೆಯುವ ಕೆಲಸ ಮಾಡಿಲ್ಲ. ಈ ಬಗ್ಗೆ ನನ್ನ ವಿರುದ್ದ ಸುಖಾ ಸುಮ್ಮನೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಇನ್ನು ಶಾಸಕರಿಂದ ಕಪಾಳಮೋಕ್ಷ ಮಾಡಿಸಿಕೊಂಡಿದ್ದಾನೆ ಎನ್ನಲಾದ ಕೆ..ಆರ್.ನಗರದ ಮಹದೇವ ಎಂಬುವವರೇ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದು, ಶಾಸಕರು ನನಗೆ ಹೊಡೆದಿಲ್ಲ. ಬೆನ್ನಿಗೆ ತಟ್ಟಿ ಪಕ್ಕಕ್ಕೆ ಕರೆದು ಕೂರಿಸಿದರು. ಅಂದು ಸಭೆಯಲ್ಲಿ ನಾನು ಡೈರಿ ವಿಚಾರವಾಗಿ ಸಮಸ್ಯೆ ಹೇಳುತ್ತಿದ್ದೆ. ಬೇರೆಯವರು ಬೇರೆ ಬೇರೆ ಸಮಸ್ಯೆ ಹೇಳುತ್ತಿದ್ದರು. ಎಲ್ಲವೂ ಗೊಂದಲಮಯವಾಗಿತ್ತು. ನಮ್ಮ ಶಾಸಕರಿಗೆ ಏನೂ ಕೂಡ ಕೇಳಿಸುತ್ತಿರಲಿಲ್ಲ. ನಾನು ಪಕ್ಕದಲ್ಲೇ ನಿಂತಿದ್ದೆ, ಬೆನ್ನು ತಟ್ಟಿ ಪಕ್ಕದಲ್ಲಿ ಕುಳಿತುಕೊಳ್ಳಲು ಹೇಳಿದರು. ಯಾವುದೇ ಹಲ್ಲೆ ಮಾಡಿಲ್ಲ. ಅದು ಸತ್ಯಕ್ಕೆ ದೂರವಾದ ಆರೋಪ. ನನ್ನ ಬೆನ್ನಿಗೆ ತಟ್ಟಿ ಪಕ್ಕಕ್ಕೆ ಕೂರಿಸಿದ್ದನ್ನು ಬಿಟ್ಟರೆ ಯಾವ ಗಲಾಟೆಯೂ ಆಗಿಲ್ಲ ಎಂದು ಹೇಳಿದ್ದಾರೆ.





