ಮೈಸೂರು : ಕೆಎಸ್‌ಆರ್‌ಟಿಸಿ ಬಸ್ ಹರಿದು ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಇಲ್ಲಿನ ಶ್ರೀರಾಂಪುರದಲ್ಲಿ ನಡೆದಿದೆ.
ಶ್ರೀರಾಂಪುರದ ನಿವಾಸಿ ಪುರುಷೋತ್ತಮಯ್ಯ(71) ಮೃತಪಟ್ಟವರು. (ಇಂದು)ಗುರುವಾರ ಬೆಳಿಗ್ಗೆ 7 ಗಂಟೆಗೆ ಹಾಲಿಗೆ ಬೂತ್‌ಗೆ ಬಂದು ಹಾಲು ಖರೀದಿಸಿ ತಮ್ಮ ಸ್ಕೂಟರ್ ನಲ್ಲಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಸ್ಕೂಟರ್‌ಗೆ ಕೆಎಸ್‌ಆರ್‌ಟಿಸಿ ನಗರ ಸಂಚಾರ ಬಸ್ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಪುರುಷೋತ್ತಮಯ್ಯ ಕೆಳಗುರುಳಿದ್ದು, ಬಸ್ ಟಯರ್ ಅವರ ತಲೆಯ ಮೇಲೆ ಹರಿದಿದೆ. ಈ ಸಂಬಂಧ ಕೆ.ಆರ್ ಸಂಚಾರ ಠಾಣೆಯಲ್ಲಿ ದೂರು ದಾಖಲಾಗಿದೆ.
ರಸ್ತೆಯ ಪಕ್ಕದಲ್ಲೇ ತರಕಾರಿ ಮಾರಾಟಗಾರರು ಇರುವುದರಿಂದ ಓಡಾಡಲು ತೊಡಕಾಗಿದೆ. ಮೊದಲು ಅಲ್ಲಿಂದ ತರಕಾರಿ ಮಾರಾಟಗಾರರನ್ನು ತೆರವುಗೊಳಿಸಿ ಬೇರೆ ಕಡೆ ವ್ಯವಸ್ಥೆ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.





