ಮೈಸೂರು : ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗದಲ್ಲಿ ನೂತನವಾಗಿ ತಯಾರಿಸಲಾಗಿರುವ ಪಠ್ಯಕ್ಕೆ ಶಿಕ್ಷಣ ಮಂಡಳಿ ಸಾಮಾನ್ಯ ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು.
ಮೈಸೂರು ವಿವಿ ಕ್ರಾಫರ್ಡ್ ಭವನದಲ್ಲಿ ಸೋಮವಾರ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಅಧ್ಯಕ್ಷತೆಯಲ್ಲಿ ನಡೆದ ಶೈಕ್ಷಣಿಕ ಸಾಲಿನ ಪ್ರಥಮ ಶಿಕ್ಷಣ ಮಂಡಳಿ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಪಠ್ಯ ಬದಲಾವಣೆ ರಾಜ್ಯ ಸರ್ಕಾರ ಮತ್ತು ಸ್ಟೇಟ್ ಎಜುಕೇಷನ್ ಕಮಿಷನ್ ಬದ್ಧತೆಯಾಗಿದೆ. ಪಠ್ಯ ಬದಲಾವಣೆ ಸಂಬಂಧ ಕಮಿಷನ್ ಪೂರ್ಣ ವರದಿ ಸಲ್ಲಿಸಿದೆ. ಜುಲೈ ತಿಂಗಳಲ್ಲಿ ವರದಿ ಬಿಡುಗಡೆಯಾಗಬಹುದು. ಸರ್ಕಾರದ ಆದೇಶಕ್ಕೆ ಬದ್ಧರಾಗಿ ಸಣ್ಣಪುಟ್ಟ ಬದಲಾವಣೆ ಇದ್ದರೆ ಮಾಡಬೇಕಾಗುತ್ತದೆ ಎಂದು ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಹೇಳಿದರು.
ಪ್ರಥಮ ಸಭೆಯಲ್ಲಿ ದತ್ತಿ ಸ್ಥಾಪನೆ ಘೋಷಣೆ: ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿ ನಾಮನಿರ್ದೇಶನಗೊಂಡ ಪ್ರಥಮ ಸಭೆಯಲ್ಲಿ ಭಾಗವಹಿಸಿದ್ದ ವಿಧಾನ ಪರಿಷತ್ ಕೆ. ವಿವೇಕಾನಂದ ಅವರು ತಮ್ಮ ಪೋಷಕರ ಹೆಸರಿನಲ್ಲಿ ದತ್ತಿ ಸ್ಥಾಪಿಸುವುದಾಗಿ ಘೋಷಿಸಿದರು.
ಚಿನ್ನದ ಪದಕ, ದತ್ತಿ ಸ್ಥಾಪನೆಗೆ ಒಪ್ಪಿಗೆ ಕೊಡುವ ವೇಳೆ ಮಾಹಿತಿ ಪಡೆದುಕೊಂಡ ಅವರು, ಕೂಡಲೇ ದತ್ತಿ ಸ್ಥಾಪಿಸುವುದಾಗಿ ಪ್ರಕಟಿಸಿದರು. ಸಭೆಯು ಕೆ. ವಿವೇಕಾನಂದರ ನಿರ್ಧಾರವನ್ನು ಸ್ವಾಗತಿಸಿತು. ಸಭೆಯಲ್ಲಿ ಕುಲಸಚಿವೆ ಎಂ.ಕೆ. ಸವಿತಾ, ಪರೀಕ್ಷಾಂಗ ಕುಲಸಚಿವ ಪ್ರೊ.ಎನ್.ನಾಗರಾಜ್, ಹಣಕಾಸು ಅಧಿಕಾರಿ ಕೆ.ಎಸ್.ರೇಖಾ ಮತ್ತಿತರರು ಹಾಜರಿದ್ದರು.





