ಮೈಸೂರು : ನಗರ, ಗ್ರಾಮೀಣ ಪ್ರದೇಶಗಳ ಜನರಿಗೆ ಅಧಿಕಾರಿಗಳು ಸ್ಪಂದಿಸುವ ಜತೆಗೆ ಪ್ರಗತಿಯಲ್ಲಿ ಮೈಸೂರು ಮೊದಲನೇ ಸ್ಥಾನದಲ್ಲಿರುವಂತೆ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ಜಿಲ್ಲಾ ಮಟ್ಟದ ಜನ ಸ್ಪಂದನಾ ಕಾರ್ಯಕ್ರಮದ ಪ್ರಾರಂಭದಲ್ಲಿ ಮಾತನಾಡಿ, ಮೂರು ತಿಂಗಳಿಗೊಮ್ಮೆ ಕರ್ನಾಟಕ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ, ಆರು ತಿಂಗಳಿಗೊಮ್ಮೆ ಜನ ಸ್ಪಂದನಾ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ. ಅಧೀಕಾರಿಗಳು ಜನಸ್ಪಂದನಾ ಸಭೆಯಲ್ಲಿ ಬರುವ ಅರ್ಜಿಗಳನ್ನು ಕಾಲಮಿತಿಯೊಳಗೆ ಪರಿಶೀಲಿಸಿ ಪರಿಹರಿಸಬೇಕು ಎಂದು ಸಲಹೆ ನೀಡಿದರು.
ಅಧಿಕಾರಿಗಳು ಜನರ ನಡುವೆ ಇದ್ದುಕೊಂಡು ಕೆಲಸ ಮಾಡಬೇಕು. ದಸರಾ ಮಹೋತ್ಸವಕ್ಕೆ ಇನ್ನೂ ಮೂರು ತಿಂಗಳು ಬಾಕಿ ಇದೆ. ದಸರೆಯಲ್ಲಿ ತೊಡಗಿಸಿಕೊಳ್ಳುತ್ತೇವೆಂದು ಅಭಿವೃದ್ಧಿ ಕೆಲಸವನ್ನು ಬದಿಗೊತ್ತುವುದು ಬೇಡ. ದಸರೆ ಜತೆಗೆ, ಪ್ರಗತಿಯಲ್ಲಿ ಮೈಸೂರು ಮೊದಲನೇ ಸ್ಥಾನದಲ್ಲಿ ಇರುವಂತೆ ಮಾಡಬೇಕು ಎಂದು ತಾಕೀತು ಮಾಡಿದರು.
ರಾಜ್ಯ ಸರ್ಕಾರದ ಆಡಳಿತ ಜನರ ಮನೆ ಬಾಗಿಲಿಗೆ ತಲುಪಬೇಕು. ಸರ್ಕಾರದ ಗ್ಯಾರಂಟಿ ಯೋಜನೆಗಳು ಪ್ರತಿ ಮನೆಗೂ ಮುಟ್ಟಬೇಕು. ಜನಪರವಾಗಿರುವ ಸರ್ಕಾರ ಜನರ ಸಮಸ್ಯೆಗೆ ಸ್ಪಂದಿಸಬೇಕು. ಅಧಿಕಾರಿಗಳು ನಿಮ್ಮೊಂದಿಗೆ ನಾವಿದ್ದೇವೆ ಎಂಬ ಸಂದೇಶ ನೀಡಬೇಕು ಎಂದರು.





