Mysore
16
few clouds

Social Media

ಶುಕ್ರವಾರ, 30 ಜನವರಿ 2026
Light
Dark

ಮೈಸೂರು | 21 ರಂದು ಪಲ್ಸ್ ಪೋಲಿಯೋ ಅಭಿಯಾನ

ಮೈಸೂರು : ಡಿಸೆಂಬರ್ 21 ರಂದು ಜಿಲ್ಲೆಯಾದ್ಯಂತ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 5 ವರ್ಷದೊಳಗಿನ ಪ್ರತಿ ಮಗುವಿಗೆ ತಪ್ಪದೆ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಕರೆ ನೀಡಿದರು.

ಶುಕ್ರವಾರ ಜಿಲ್ಲಾ ಪಂಚಾಯತ್ ಡಿ.ದೇವರಾಜ ಅರಸು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಡಿಸೆಂಬರ್ 21 ರಂದು ಜಿಲ್ಲೆಯಾದ್ಯಂತ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೆ ಬೂತ್ ಮಟ್ಟದಲ್ಲಿ ಲಸಿಕೆ ನೀಡಲಾಗುತ್ತದೆ. ಡಿಸೆಂಬರ್ 22 ರಿಂದ ಡಿಸೆಂಬರ್ 24 ರವರೆಗೆ ಮನೆ ಮನೆಗೆ ಭೇಟಿ ನೀಡಿ ಲಸಿಕೆ ನೀಡುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ಡಿಸೆಂಬರ್ 21 ರಿಂದ 24 ರವರೆಗೆ 4 ದಿನಗಳು ಸಂಚಾರ ಕೇಂದ್ರಗಳು ಹಾಗೂ ಹೆಚ್ಚಿನ ಅಪಾಯ ಪ್ರದೇಶಗಳಲ್ಲಿ ವಿಶೇಷ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಡಿಸೆಂಬರ್ 21 ಕ್ಕೆ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪ್ರತಿಯೊಂದು ಮಗುವಿಗೂ ತಪ್ಪಿದೆ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿ. ಪಲ್ಸ್ ಪೋಲಿಯೋ ಲಸಿಕೆ ನೀಡಲು ಅಗತ್ಯವಿರುವ ಸಿಬ್ಬಂದಿಗಳಿಗೆ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಿ. ರೂಟ್ ಮ್ಯಾಪ್ ಗಳನ್ನು ಸಮರ್ಪಕವಾಗಿ ಮಾಡಿಕೊಳ್ಳಿ ಎಂದು ಸೂಚನೆ ನೀಡಿದರು.

ಇದನ್ನು ಓದಿ: ವೈದ್ಯ, ನರ್ಸ್‌ ಹುದ್ದೆ ಭರ್ತಿಗೆ ಒಂದು ತಿಂಗಳೊಳಗೆ ಕ್ರಮ : ಆರೋಗ್ಯ ಸಚಿವ ಗುಂಡೂರಾವ್‌

ಡಾ.ಸುದೀರ್ ನಾಯಕ್ ಮಾತನಾಡಿ, ಕಳೆದ 14 ವರ್ಷಗಳಿಂದ ದೇಶದಲ್ಲಿ ಯಾವುದೇ ಪೋಲಿಯೋ ಪ್ರಕರಣಗಳು ಕಂಡು ಬಂದಿಲ್ಲ. ಕರ್ನಾಟಕದಲ್ಲಿ 2007 ರಲ್ಲಿ ಕೊನೆಯದಾಗಿ ಒಂದು ಪೋಲಿಯೋ ಪ್ರಕರಣ ಕಂಡುಬಂದಿತ್ತು. ನಂತರ ಯಾವುದೇ ಪೋಲಿಯೋ ಪ್ರಕರಣಗಳು ಕಂಡು ಬಂದಿಲ್ಲ. ಪೋಲಿಯೋ ಲಸಿಕೆ ಹಾಕಿಸಿದ ಮಗುವಿನ ಬೆರಳಿಗೆ ಇಂಕ್ ಹಾಕಲಾಗುವುದು. ಇದರಿಂದ ಯಾರಿಗೆ ಲಸಿಕೆ ಹಾಕಲಾಗಿದೆ ಎಂಬುದನ್ನು ಹಾಗೂ ಎರಡೆರಡು ಬಾರಿ ಲಸಿಕೆ ಹಾಕಿಸುವುದನ್ನು ತಪ್ಪಿಸಬಹುದಾಗಿದೆ ಎಂದು ತಿಳಿಸಿದರು.

ವಲಸೆ ಹೋಗಿರುವ ಹಾಗೂ ವಲಸೆ ಬಂದಿರುವ ಕುಟುಂಬದ ಮಕ್ಕಳನ್ನು ಗುರುತಿಸಿ ಲಸಿಕೆ ನೀಡಲು ಕ್ರಮ ವಹಿಸಲಾಗಿದೆ. ಜಿಲ್ಲೆಯಲ್ಲಿ 5 ವರ್ಷದೊಳಗಿನ 2,22,084 ಮಕ್ಕಳು ಇದ್ದಾರೆ. ಇವರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. 1648 ಬೂತ್ ಗಳಲ್ಲಿ ಲಸಿಕೆ ನೀಡಲಾಗುತ್ತದೆ. 50 ಮೊಬೈಲ್ ಟಿಮ್ ಗಳನ್ನು ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಯುಕೇಶ್ ಕುಮಾರ್, ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಶೇಕ್ ತನ್ವೀರ್ ಆಸಿಫ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ ಕುಮಾರ್ ಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರಾಜು, ಆರ್.ಸಿ.ಹೆಚ್ ಅಧಿಕಾರಿ ಮಹಮ್ಮದ್ ಸಿರಾಜ್ ಅವರು ಸೇರಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Tags:
error: Content is protected !!