ಮೈಸೂರು: ರಂಗಾಯಣ ಆವರಣದಲ್ಲಿ ಬಹೂರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ವೇದಿಕೆ ಸಜ್ಜುಗೊಂಡಿದ್ದು, ಮಕರ ಸಂಕ್ರಾಂತಿಯ(ಜ.14) ದಿನದಿಂದ ಆರು ದಿನಗಳ ಕಾಲ ನಾಟಕೋತ್ಸವವು ರಂಗಾಸಕ್ತರನ್ನು ರಂಜಿಸಲಿದೆ.
ಮುಧುವಣಗಿತ್ತಿಂತೆ ಸಿಂಗಾರಗೊಂಡಿರುವ ರಂಗಾಯಣದ ಸುತ್ತಲೂ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ವಿವಿಧ ಆಕರ್ಷಕ ಬಣ್ಣಗಳಿಂದ ಕಂಗೊಳಿಸುತ್ತಿರುವ ಬಹುರೂಪಿಗೆ ವಿವಿಧ ಭಾಷೆಯ ನಾಟಕಗಳು, ಚಲನಚಿತ್ರೋತ್ಸವ, ಭಿತ್ತಿಚಿತ್ರ ಪ್ರದರ್ಶನ, ಕರಕುಶಲ ವಸ್ತು ಪ್ರದರ್ಶನ, ಪುಸ್ತಕ ಪ್ರದರ್ಶನ, ದೇಸಿ ಆಹಾರ ಮೇಳ ಹಾಗೂ ರಾಷ್ಟ್ರೀಯ ವಿಚಾರ ಸಂಕಿರಣ ಸೇರಿದಂತೆ ಹಲವು ಆಕರ್ಷಕ ಪ್ರದರ್ಶನಗಳು ವಿಶೇಷ ಮೆರುಗು ನೀಡಲಿವೆ.
ಒಂದು ವಾರ ನಡೆಯಲಿರುವ ಬಹುರೂಪಿ ಉತ್ಸವದಲ್ಲಿ ದೇಶಾದ್ಯಂತದ ೫೦೦ಕ್ಕೂ ಹೆಚ್ಚಿನ ರಂಗಕಲಾವಿದರು, ೩೦೦ಕ್ಕೂ ಹೆಚ್ಚಿನ ಜನಪದ ಕಲಾವಿದರು ಭಾಗವಹಿಸುವ ನಿರೀಕ್ಷೆ ಇದೆ.
ಜ.೧೪ ರಂದು ಸಂಜೆ ೫.೩೦ಕ್ಕೆ ವನರಂಗದಲ್ಲಿ ಬಹುರೂಪಿ ನಾಟಕೋತ್ಸವಕ್ಕೆ ನಟ, ಹಿರಿಯ ರಂಗಕರ್ಮಿ ಅತುಲ್ ಕುಲಕರ್ಣಿ ಚಾಲನೆ ನೀಡುವರು. ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸುವರು. ಕರಕುಶಲ ಮಳಿಗೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಉದ್ಘಾಟಿಸುವರು. ಸಂಸದ ಯದುವೀರ ಒಡೆಯರ್, ಶಾಸಕ ಕೆ.ಹರೀಶ್‌ಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ರಂಗಾಯಣದ ಉಪ ನಿರ್ದೇಶಕ ಡಾ.ಎಂ.ಡಿ.ಸುದರ್ಶನ, ರಂಗಸಮಾಜದ ಸದಸ್ಯ ಸುರೇಶ್ ಬಾಬು ಮತ್ತಿತರರು ಹಾಜರಿರುತ್ತಾರೆ.