ಮೈಸೂರು: ಮುಡಾ ಹಗರಣದ ಬಗ್ಗೆ ಸಂಪೂರ್ಣ ತನಿಖೆ ಆಗೋವರೆಗೂ ನಮ್ಮ ಹೋರಾಟ ನಿಲ್ಲಲ್ಲ ಎಂದು ಮೈಸೂರು-ಕೊಡಗು ಸಂಸದ ಹಾಗೂ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕಿಡಿಕಾರಿದ್ದಾರೆ.
ಈ ಬಗ್ಗೆ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣ ವಿರೋಧಿಸಿ ಇಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಿದೆ. ಈ ಪ್ರತಿಭಟನೆ ಸದ್ಯಕ್ಕೆ ನಿಲ್ಲುವುದಿಲ್ಲ. ಇದು ಮುಂದುವರಿಯುತ್ತದೆ. ಒಂದು ಕಡೆ ಹಗರಣಗಳು ಒಂದಾದ ಮೇಲೊಂದರಂತೆ ನಡೆಯುತ್ತಿವೆ. ಇತ್ತ ಗ್ಯಾರಂಟಿ ಯೋಜನೆಯಿಂದ ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ನಿಂತುಹೋಗಿವೆ ಎಂದು ಕಿಡಿಕಾರಿದರು.
ಇನ್ನೂ ಮುಂದುವರಿದು ಮಾತನಾಡಿದ ಅವರು, ರಾಜ್ಯಾದ್ಯಂತ ಡೆಂಗ್ಯೂ ಪ್ರಕರಣಗಳು ಏರಿಕೆಯಾಗುತ್ತಿದ್ದು, ಜನಸಾಮಾನ್ಯರು ಬಲಿಯಾಗುತ್ತಿದ್ದರೂ ಯಾವುದೇ ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ. ಡೆಂಗ್ಯೂ ಬಗ್ಗೆ ರಾಜ್ಯ ಸರ್ಕಾರ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಂಡಿಲ್ಲ. ಮೈಸೂರು ಸಂಸ್ಥಾನದಿಂದ ಇಂದಿನವರೆಗೂ ನಮ್ಮ ರಾಜ್ಯ ಪ್ರಗತಿಪರವಾಗಿತ್ತು. ಆದರೆ ಈಗ ನಮ್ಮ ರಾಜ್ಯ ಆರ್ಥಿಕವಾಗಿ ಹಿಂದುಳಿಯುತ್ತಿದೆ. ಈ ಭ್ರಷ್ಟ ಸರ್ಕಾರದಿಂದ ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು.