Mysore
26
clear sky

Social Media

ಗುರುವಾರ, 22 ಜನವರಿ 2026
Light
Dark

ಮೈಸೂರು | ಕ್ರಿಸ್ತಶಕ 948ರ ಗಂಗಲ ಕಾಲದ ಶಾಸನ ಪತ್ತೆ

ಮೈಸೂರು : ಕ್ರಿಸ್ತಶಕ 948ರ ಗಂಗರ ಕಾಲದ ಅಪ್ರಕಟಿತ ಶಾಸನವು ನಗರದ ನಾಡನಹಳ್ಳಿಯಲ್ಲಿ ಪತ್ತೆಯಾಗಿದೆ. ಪುರಾತತ್ವಜ್ಞ ಪ್ರೊ. ರಂಗರಾಜು ಹಾಗೂ ಪುರಾತತ್ವ ಸಂಶೋಧಕ ಡಾ. ಶಶಿಧರ ತಂಡವು ಈ ಪತ್ತೆ ಕಾರ್ಯವನ್ನು ನಡೆಸಿದೆ.

ಮೈಸೂರು ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರದಿಂದ ಪೂರ್ವ ದಿಕ್ಕಿಗೆ ಸುಮಾರು ಹತ್ತು ಕಿ.ಮೀ. ದೂರದಲ್ಲಿರುವ ನಾಡನಹಳ್ಳಿಯ ಪ್ರವೇಶದ್ವಾರದ ಬಲದ್ವಾರದಲ್ಲಿ ಗಂಗರ ಕಾಲದಲ್ಲಿ ನಿರ್ಮಾಣಗೊಂಡಿರುವ ಮಹಾಲಿಂಗೇಶ್ವರ ದೇವಾಲಯವಿದೆ. ಈ ದೇವಾಲಯದ ಆವರಣ ಗೋಡೆಯ ಒಳಗೆ ಬಲಪಾರ್ಶ್ವಾದಲ್ಲಿ ಪೂರ್ವ ದಿಕ್ಕಿಗೆ ಮುಖಮಾಡಿ ನಿಲ್ಲಿಸಿರುವ ಗಂಗ ದೊರೆ ಇಮ್ಮಡಿ ಬೂತುಗನ ಕಾಲದ ಶಾಸನವನ್ನು ಕಂಡುಹಿಡಿಯಲಾಗಿದೆ. ಇದು ಅಪ್ರಕಟಿತ ಶಾಸನವಾಗಿದ್ದು, ಎರಡು ಅಡಿ ಅಗಲ ಹಾಗೂ ಎರಡುವರೆ ಅಡಿಗಳಷ್ಟು ಎತ್ತರವಾದ ‘ಬಿಳಿಕಣಶಿಲೆಯಲ್ಲಿ’ ಕೆತ್ತಲ್ಪಟ್ಟಿದ್ದು ಆರು ಸಾಲುಗಳನ್ನು ಹೊಂದಿದೆ. ಇದು ಇಂದಿಗೆ ಸರಿಸುಮಾರು ೧,೦೭೬ ವರ್ಷಗಳಷ್ಟು ಪ್ರಾಚೀನವಾದ ‘ಕನ್ನಡ ಭಾಷೆ ಮತ್ತು ಲಿಪಿ’ಯಲ್ಲಿ ಬರೆಯಲ್ಪಟ್ಟಿರುವ ಶಾಸನವಾಗಿದೆ ಎಂದು ತಂಡ ಹೇಳಿದೆ.

ಇದನ್ನು ಓದಿ: ನ.11ಕ್ಕೆ ಆರ್.ಎಸ್.ಎಸ್ ವಿರುದ್ಧ ʼದಸಂಸ ಪ್ರತಿರೋಧ ಸಮಾವೇಶʼ

ಶಾಸನದ ಸಾರಾಂಶ ಹೀಗಿದೆ….
ಕ್ರಿ.ಶ. 948ರ ಕಾಲದ ಈ ಶಾಸನವು ಕನ್ನಡ ಲಿಪಿ ಮತ್ತು ಭಾಷೆಯಲ್ಲಿ ಕೆತ್ತಲ್ಪಟ್ಟಿದ್ದು, ಆರು ಸಾಲುಗಳನ್ನು ಹೊಂದಿದೆ. ಗಂಗ ಸಾಮ್ರಾಜ್ಯದ ದೊರೆ ಎರಡನೇ ಬೂತುಗನ ಆಳ್ವಿಕೆಯ ಸಂದರ್ಭದಲ್ಲಿ ಬೂತುಗನ ಅಂಗರಕ್ಷಕನಾದ ತೊರೆಯ(ಬೆಸ್ತ) ಜನಾಂಗದ ಮಾರೆಮ್ಮಾ ಎಂಬುವನು ತೆರಿಗೆಯಿಲ್ಲದೆ ಹೂತೋಟವನ್ನು ದೇವಾಲಯಕ್ಕೆ ದಾನ ನೀಡಿ, ಅದರ ನಿರ್ವಹಣೆಯ ಜವಾಬ್ದಾರಿಯನ್ನು ಗ್ರಾಮದ ಮುಖ್ಯಸ್ಥನಾದ ವಿಜಕೇತ ಗಾವುಂಡನಿಗೆ ವಹಿಸಿದ್ದಿರಬಹುದು. ಈ ಶಾಸನ ತ್ರುಟಿತಗೊಂಡಿರುವುದರಿಂದ ಶಾಸನದ ಪೂರ್ಣಪಾಠವನ್ನು ನಿಖರವಾಗಿ ಹೇಳಲಾಗುವುದಿಲ್ಲ.

ಆದರೆ ‘ವಿಜಕೇತ ಗಾವುಂಡ ದಿಕ್ಕು’ ಎಂದು ಶಾಸನದಲ್ಲಿ ಉಲ್ಲೇಖವಿರುವುದರಿಂದ ತೋಟದ ನಿರ್ವಹಣೆಯನ್ನು ಗ್ರಾಮದ ಮುಖ್ಯಸ್ಥನಾದ ವಿಜಕೇತ ಗಾವುಂಡನಿಗೆ ವಹಿಸಿದ್ದಿರಬಹುದು ಎಂದು ಹೇಳಬಹುದಾಗಿದೆ. ಈ ಶಾಸನದಲ್ಲಿ ದೇವಾಲಯದ ಉಬ್ಬುಚಿತ್ರವನ್ನು ಸಾಂಕೇತಿಕವಾಗಿ ಕೆತ್ತಲಾಗಿದ್ದು ಈ ಉಬ್ಬುಚಿತ್ರವು ದೇವಾಲಯಕ್ಕೆ ಸಂಬಂಧಿಸಿದ ದಾನ ಶಾಸನವೆಂಬುದನ್ನು ಖಚಿತಪಡಿಸುತ್ತದೆ. ಆದರೆ ಯಾವ ದೇವಾಲಯಕ್ಕೆ ಸಂಬಂಧಿಸಿದ ದಾನಶಾಸನ ಎಂಬ ಮಾಹಿತಿ ಇಲ್ಲ. ಶಾಸನ ದೊರೆತಿರುವ ಮಹಾಲಿಂಗೇಶ್ವರ ದೇವಾಲಯದಲ್ಲಿರುವ ಶಿವಲಿಂಗವು ಗಂಗರ ವಾಸ್ತುಶೈಲಿಯಲ್ಲಿರುವುದರಿಂದಲೂ ಹಾಗೂ ಶಾಸನವೂ ಗಂಗರ ಕಾಲದ್ದಾಗಿರುವುದರಿಂದಲೂ ಇದು ಮಹಾಲಿಂಗೇಶ್ವರ ದೇವಾಲಯಕ್ಕೆ ಸಂಬಂಧಿಸಿದ ದಾನಶಾಸನ ಎಂದು ತಿಳಿಯಬಹುದಾಗಿದೆ. ಈ ಶಾಸನದ ಪಾಠದ ಕೊನೆಯಲ್ಲಿ ಕರುವಿಗೆ ಹಾಲುಣಿಸುತ್ತಿರುವ ಹಸುವಿನ ಉಬ್ಬುಶಿಲ್ಪವನ್ನು ಕೆತ್ತಲಾಗಿದ್ದು, ಇದು ಈ ಶಾಸನವನ್ನು ಹಾಳು/ನಾಶ ಮಾಡಿದವರಿಗೆ ಗೋವನ್ನು ಕೊಂದ ಪಾಪ ಬರುತ್ತದೆ ಎಂಬ ಶಾಪಾಶಯದ ಸಂಕೇತವಾಗಿದೆ.

Tags:
error: Content is protected !!