ಮೈಸೂರು : ಕೋಮುವಾದದ ವಿರುದ್ಧ ಕರ್ನಾಟಕ ಸ್ಟೇಟ್ ಸುನ್ನಿ ಸ್ಟೂಡೆಂಟ್ ಫೆಡರೇಷನ್ (ಎಸ್‌ಎಸ್‌ಎಫ್) ಆಯೋಜಿಸಿರುವ 12 ದಿನಗಳ ಸೌಹರ್ದ ನಡಿಗೆಗೆ ಗಾಂಧಿನಗರದ ಉರಿಲಿಂಗಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿ ಭಾನುವಾರ ಚಾಲನೆ ನೀಡಿದರು.
ಮೈಸೂರಿನ ಫೌಂಟೇನ್ ವೃತ್ತದಿಂದ ಸೆಂಟ್ ಫಿಲೋಮಿನಾ ಚರ್ಚ್ ವೃತ್ತದವರೆಗೆ ಸೌಹಾರ್ದ ನಡಿಗೆ ಜರುಗಿತು.
ಬಳಿಕ ಮಾತನಾಡಿದ ಜ್ಞಾನಪ್ರಕಾಶ್ ಸ್ವಾಮೀಜಿ, ಧರ್ಮಕ್ಕಿಂತ ನಮಗೆ ದೇಶ ದೊಡ್ಡದೇ ಹೊರತು ಧರ್ಮ ದೊಡ್ಡದಲ್ಲ. ಧರ್ಮದಲ್ಲಿ ಹೆಸರಿಯಲ್ಲಿ ಭಯೋತ್ಪಾದನೆ ಮಾಡುವ ಯಾವುದೇ ಕೃತ್ಯಗಳು ನಡೆದರೂ ಅದನ್ನು ಖಂಡಿಸುತ್ತೇವೆ ಎಂದರು.
ದೇಶದಲ್ಲಿ ನಡೆಯುತ್ತಿರುವ ಕೋಮುವಾದ, ಹಿಂಸಾಚಾರ ಯಾವುದೇ ಧರ್ಮದಲ್ಲಿಯೂ ಇಲ್ಲ. ಧರ್ಮ ಮತ್ತು ಜಾತಿ ವಿಚಾರದಲ್ಲಿ ಬೆಂಕಿ ಹಚ್ಚುವುದು, ರಾಜಕಾರಣ ಮಾಡುವುದು ಅಕ್ಷಮ್ಯ ಅಪರಾಧವಾಗಿದೆ. ಹೆಣ ಮತ್ತು ಹಣದ ನಡುವೆ ರಾಜಕಾರಣ ಮಾಡುವಂತಹದ್ದು ಕೂಡ ಅಪರಾಧವಾಗಿದೆ ಎಂದರು.
ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸಂವಿಧಾನವನ್ನು ಒಪ್ಪಿಕೊಂಡ ಮೇಲೆ ಧರ್ಮ ನಮ್ಮ ನಮ್ಮ ವೈಯಕ್ತಿವಾಗಿರಬೇಕು. ದೇಶ ದೊಡ್ಡದಾಗಿರಬೇಕು. ದೇಶದ ಅಖಂಡತೆ ಮತ್ತು ಭ್ರಾತೃತ್ವವೇ ನಮಗೆ ಬಹಳ ಮುಖ್ಯವಾಗಿದುದು. ಹಾಗಾಗಿ ಧರ್ಮಗಳು ನಮ್ಮ ವೈಯಕ್ತಿವಾಗಿರಲಿ. ದೇಶ ವಿಷಯ ಬಂದಾಗ ದೇಶದ ಪರವಾಗಿ ಏಕತೆಯಿಂದ ನಿಲ್ಲಬೇಕು ಎಂಬುದನ್ನು ದೇಶದ ಸಂವಿಧಾನ ನಮಗೆ ಬೋದಿಸಿದೆ ಎಂದು ತಿಳಿಸಿದರು.