ಮೈಸೂರು : ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಸಂಭ್ರಮಾಚರಣೆಗಾಗಿ ಪ್ರವಾಸಿಗರು, ಸ್ಥಳೀಯರಿಗೆ ಮನರಂಜನೆ ಒದಗಿಸಲು ಅರಮನೆ ಅಂಗಳದಲ್ಲಿ ಡಿ.೨೧ರಿಂದ ೩೧ರವರೆಗೆ ಫಲಪುಷ್ಪ ಪ್ರದರ್ಶನ ನಡೆಯಲಿದೆ.
ಅರಮನೆ ಆವರಣವು ಹೂವುಗಳಿಂದ ಆಕರ್ಷಿಸಲು ಸಜ್ಜಾಗಿದೆ. ಭಾನುವಾರ ಸಂಜೆ ೪ ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಮೈಸೂರು ಅರಮನೆ ಮಂಡಳಿ ವತಿಯಿಂದ ಬೆಳಿಗ್ಗೆ ೧೦ ಗಂಟೆಯಿಂದ ರಾತ್ರಿ ೯ರವರೆಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಈ ಬಾರಿ ಸುಮಾರು ೨೫,೦೦೦ ವಿಭಿನ್ನ ಅಲಂಕಾರಿಕ ಹೂ ಕುಂಡಗಳು, (ಮಾರಿಗೋಲ್ಡ್, ಸಾಲ್ವಿಯ, ಡೇಲಿಯ, ಪಿಟೋನಿಯ, ಸೇವಂತಿಗೆ, ಕೋಲಿಯಸ್, ಸಿಲೋಷಿಯ, ವರ್ಬಿನ, ಡೈಂಥಸ್, ಫ್ರೈಚ್ ಮಾರಿಗೋಲ್ಡ್,ಜಿನಿಯಾ ಪೆಲಂಬೂಡಿಯ, ಸನ್-ವರ್, ಜಪಾನ್ ಸನ್ಫ್ಲವರ್, ಆಲೇಕ್, ಸಿನೇರಿಯಾ, ಕಾಸ್‌ಮಸ್, ಪ್ಲಾಕ್ಸ್, ಕ್ಯಾಲೂಂಡಲ, ಗೋಪೆರಿಯನ್, ಮ್ಯಾಂಡೂವಿಲ, ಪಾಂಚಿಟಿಯ, ತುರೂನಿಯಂ, ಬಾಲ್ಸಂ, ಕಾಕ್ಸಕೊಂಬ್, ನಸ್ಟರ್‌ಸಿಯಂ, ಆಂಟಿರೈನಂ, ಬೋನ್ಸಾಯ್ ಗಿಡಗಳು, ಸೇರಿದಂತೆ ೩೫ ಜಾತಿಯ ಹೂವಿನ ಗಿಡಗಳು ಹಾಗೂ ಅಂದಾಜು ೪ ಲಕ್ಷ ವಿಧದ ಅಲಂಕಾರಿಕ ಹೂವುಗಳಿಂದ ಹಾಗೂ ಊಟಿ ಕಟ್ ಫ್ಲವರ್‌ಗಳಿಂದ ಅಲಂಕರಿಸಲಾಗಿರುತ್ತದೆ. ಶೃಂಗೇರಿ ದೇವಸ್ಥಾನದ ಮಾದರಿಯನ್ನು ಹೂವಿನಿಂದ ರೂಪಿಸುವುದು ವಿಶೇಷವಾಗಿದೆ.





