ಮೈಸೂರು : ಮೈಸೂರು ಜಿಲ್ಲೆಯಾದ್ಯಂತ ಕ್ರೈಸ್ತ ಭಾಂದವರು ಕ್ರಿಸ್‌ಮಸ್ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದರು.
ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ನಗರದ ಐತಿಹಾಸಿಕ ಸಂತ ಫಿಲೋಮಿನಾ ಚರ್ಚ್ ಸೇರಿದಂತೆ ನಗರದ ವಿವಿಧ ಕಡೆಗಳಲ್ಲಿರುವ ಕ್ರೈಸ್ತ ದೇವಾಲಯಗಳಲ್ಲಿ ಅತ್ಯಂತ ಶ್ರದ್ದಾ ಭಕ್ತಿಯಿಂದ ಯೇಸುಕ್ರಿಸ್ತನನ್ನು ಪೂಜಿಸಲಾಯಿತು. ಕ್ರೈಸ್ತ ಬಾಂಧವರು ಬುಧವಾರ ರಾತ್ರಿಯಿಂದಲೇ ಚರ್ಚ್‌ಗಳಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಸಂತ ಫಿಲೋಮಿನಾ ಚರ್ಚ್‌ನಲ್ಲಿ ಮೈಸೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಡಾ.ಫ್ರಾನ್ಸಿಸ್ ಸೆರಾವ್ ಸಮ್ಮುಖದಲ್ಲಿ ಮಿಡ್‌ನೈಟ್ ಮಾಸ್ ನಡೆಯಿತು. ಬುಧವಾರ ರಾತ್ರಿ ೧೧ ಗಂಟೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾದವು. ನಂತರ ರಾತ್ರಿಯಿಡೀ ವಿವಿಧ ಪೂಜಾ ವಿಧಿವಿಧಾನಗಳು ನೆರವೇರಿದವು. ಜತೆಗೆ ಕರೋಲ್ ಗೀತೆಗಳನ್ನೂ ಹಾಡಲಾಯಿತು. ಡಾ.ಫ್ರಾನ್ಸಿಸ್ ಸೆರಾವ್ ಕ್ರಿಸ್‌ಮಸ್ ಸಂದೇಶ ನೀಡಿದರು. ವಿಶ್ವ ಶಾಂತಿ, ನೆಮ್ಮದಿಯಿಂದ ಬಾಳುವಂತಾಗಲಿ ಎಂದು ಪ್ರಾರ್ಥಿಸಿದರು.
ಇದನ್ನು ಓದಿ: ಎಲ್ಲೆಡೆ ಕ್ರಿಸ್‌ಮಸ್ ಹಬ್ಬದ ಸಂಭ್ರಮ: ಗಣ್ಯರಿಂದ ಶುಭಾಶಯಗಳ ಮಹಾಪೂರ
ಗುರುವಾರ ಬೆಳಗ್ಗೆ ೫ ಗಂಟೆಯಿಂದ ರಾತ್ರಿ ೯ ಗಂಟೆವರೆಗೆ ಪ್ರತಿ ಒಂದು ಗಂಟೆಗೊಮ್ಮೆ ವಿಶೇಷ ಪೂಜೆ ಸಲ್ಲಿಸಲಾಯಿತು. ಚರ್ಚ್ ಕಾಂಪೌಂಡ್ ಆವರಣದಲ್ಲಿ ಎಲ್‌ಇಡಿ ಪರದೆ ಅಳವಡಿಸಿ ಪ್ರಾರ್ಥನೆ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ಪ್ರಾರ್ಥನೆ ಸಲ್ಲಿಸಿದ ಬಳಿಕ ಕ್ರೈಸ್ತ ಬಾಂಧವರು ಯೇಸು, ಸಂತ ಜೋಸೆಫ್, ಸಂತ ಮೇರಿ ಪ್ರತಿಮೆ ಎದುರು ಮೇಣದ ಬತ್ತಿಗಳನ್ನು ಹಚ್ಚಿ ಪ್ರಾರ್ಥನೆ ಸಲ್ಲಿಸಿ ಯೇಸು ಕ್ರಿಸ್ತನ ಸ್ಮರಣೆ ಮಾಡಿದರು.
ಚರ್ಚಿನ ಹೊರಭಾಗದಲ್ಲಿ ಗೋದಲಿಯನ್ನು ನಿರ್ಮಿಸಿದ್ದು, ಬುಧವಾರ ರಾತ್ರಿಯೇ ಬಾಲ ಯೇಸುವಿನ ಮೂರ್ತಿಯನ್ನು ಧರ್ಮಾಧ್ಯಕ್ಷ ಡಾ.ಫ್ರಾನ್ಸಿಸ್ ಸೆರಾವ್ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ್ದರು. ಇವರಿಗೆ ಚರ್ಚ್‌ನ ಗುರುಗಳು ಸಾಥ್ ನೀಡಿದರು. ಗೋದಲಿಯ ಪಕ್ಕದಲ್ಲಿ ಸುಂದರವಾದ ಸಂತ ಕ್ಲಾಸ್‌ನನ್ನು ನಿರ್ಮಿಸಲಾಗಿದ್ದು ಎಲ್ಲರ ಗಮನ ಸೆಳೆಯಿತು. ಇಸ್ರೆಲ್‌ನ ಬೆತ್ಲೆಹೆಮ್‌ನ ಕೊಟ್ಟಿಗೆಯೊಂದರಲ್ಲಿ ಜನ್ಮಪಡೆದ ಬಾಲ ಯೇಸು ಬೊಂಬೆ, ಯೇಸುವಿನ ತಂದೆ ಜೋಸೆಫ್, ತಾಯಿ ಮೇರಿ ಬೊಂಬೆಗಳ ಜತೆಗೆ ಕುರಿ, ಹಸು, ಒಂಟೆ ಇನ್ನಿತರ ಪ್ರಾಣಿಗಳ ಗೊಂಬೆಗಳು ಕಣ್ಮನ ಸೆಳೆದವು.





