ಬೆಂಗಳೂರು : ಮೈಸೂರಿನ ಜಗದ್ವಿಖ್ಯಾತ ಶ್ರೀ ಚಾಮರಾಜೇಂದ್ರ ಮೃಗಾಲಯ ಮತ್ತು ಬನ್ನೇರುಘಟ್ಟ ಮೃಗಾಲಯದ ಪ್ರವೇಶ ದರಗಳನ್ನು ಸರ್ಕಾರ ಪರಿಷ್ಕರಿಸಿದ್ದು, ಶೇ.20ರಷ್ಟು ದರ ಹೆಚ್ಚಳ ಮಾಡಿ ಪ್ರಸ್ತಾವನೆ ಅನುಮೋದನೆಗೆ ಅರಣ್ಯ ಇಲಾಖೆ ಸಚಿವ ಈಶ್ವರ ಬಿ.ಖಂಡ್ರೆ ಸೂಚಿಸಿದರು.
ವಿಕಾಸಸೌಧದಲ್ಲಿ ಗುರುವಾರ ನಡೆದ ಕರ್ನಾಟಕ ಮೃಗಾಲಯ ಪ್ರಾಧಿಕಾರದ 159ನೇ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈವೇಳೆ ಪಶು, ಪಕ್ಷಿಗಳ ನಿರ್ವಹಣಾ ವೆಚ್ಚ ಮತ್ತು ಸಿಬ್ಬಂದಿ ವೇತನ ಹೆಚ್ಚಳ ಹಿನ್ನೆಲೆಯಲ್ಲಿ ಪ್ರವೇಶದರವನ್ನು ಶೇ.50ರಷ್ಟು ಹೆಚ್ಚಿಸಬೇಕೆಂಬ ಪ್ರಾಧಿಕಾರದ ಪ್ರಸ್ತಾವನೆಗೆ ಪ್ರತಿಕ್ರಿಯಿಸಿದ ಈಶ್ವರ ಖಂಡ್ರೆ, ಏಕಾ ಏಕಿ ಶೇ.50ರಷ್ಟು ಹೆಚ್ಚಳ ಮಾಡುವುದು ಸರಿಯಲ್ಲ. ಶೇ.20ರಷ್ಟು ಮಾತ್ರವೇ ದರ ಹೆಚ್ಚಳ ಮಾಡಿ ಎಂದು ಪ್ರಸ್ತಾವನೆಗೆ ಅನುಮೋದನೆ ನೀಡಿ, ಸಫಾರಿ ದರ ಹೆಚ್ಚಿಸದಂತೆ ಸೂಚಿಸಿದರು.
ವನ್ಯಜೀವಿ ವೀಕ್ಷಣೆಗೆ ದೇಶ ವಿದೇಶಗಳಿಂದ ಬರುವ ಪ್ರವಾಸಿಗರಿಗೆ ಮೃಗಾಲಯದಲ್ಲಿ ಮತ್ತು ಜೈವಿಕ ಉದ್ಯಾನದಲ್ಲಿ ಶುದ್ಧ ಕುಡಿಯುವ ನೀರು, ವಿಶ್ರಾಂತಿ ಧಾಮ, ಪುರುಷ ಮತ್ತು ಮಹಿಳೆಯರ ಶೌಚಾಲಯದ ಜೊತೆಗೆ ಹೆಚ್ಚಿನ ಸೌಲಭ್ಯ, ಸೌಕರ್ಯಗಳನ್ನು ಒದಗಿಸುವಂತೆ ಮತ್ತು ಸ್ವಚ್ಛತೆ ಕಾಪಾಡುವಂತೆ ಸೂಚಿಸಿದರು.
ಯಾವುದೇ ಕಾರಣಕ್ಕೂ ಏಕ ಬಳಕೆ ಪ್ಲಾಸ್ಟಿಕ್ ತ್ಯಾಜ್ಯ ಮೃಗಾಲಯ ಮತ್ತು ಜೈವಿಕ ಉದ್ಯಾನ ಪ್ರವೇಶಿಸದಂತೆ ಕಟ್ಟೆಚ್ಚರ ವಹಿಸಲೂ ಸಚಿವರು ಮಂಡಳಿಯ ಸಭೆಯಲ್ಲಿ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು.
ಸಭೆಯಲ್ಲಿ ಮುಖ್ಯ ವನ್ಯಜೀವಿ ಪರಿಪಾಲಕರಾದ ಪಿ.ಸಿ. ರೇ, ಅಧಿಕಾರಿಗಳಾದ ಸುನೀಲ್ ಪಾಂವಾರ್, ಸೂರ್ಯಸೇನ್ ಮತ್ತಿತರರು ಪಾಲ್ಗೊಂಡಿದ್ದರು.




